ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಹರ್ ಘರ್ ಜಲ್’ (ಪ್ರತಿ ಮನೆಗೂ ನೀರು) ಗುರಿಯನ್ನು ಹೊಂದಿರುವ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಹಿನ್ನಡೆಯಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು (CAG) ತಮ್ಮ ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ. ಯೋಜನೆಗೆ ಮೀಸಲಿಟ್ಟ ಹಣವನ್ನು ಬಳಸಿಕೊಳ್ಳುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯದ ಕೊರತೆ ಹಾಗೂ ಆಡಳಿತಾತ್ಮಕ ವಿಳಂಬವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಗ್ರಾಮೀಣ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸುವ ಕೇಂದ್ರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ರಾಜ್ಯದಲ್ಲಿ ಬಹುಮಟ್ಟಿಗೆ ವಿಫಲವಾಗಿದೆ ಎಂದು ಭಾರತ ಲೆಕ್ಕನಿಯಂತ್ರಕರು ಹಾಗೂ ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ. ಈ ಹಿನ್ನಡೆಯಿಂದಾಗಿ ವಿಶೇಷವಾಗಿ ಬಯಲು ಸೀಮೆ ಮತ್ತು ನೀರಿನ ಅಭಾವವಿರುವ ಜಿಲ್ಲೆಗಳಲ್ಲಿ ಜನರು ಇನ್ನೂ ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತಾತ್ಮಕ ವಿಳಂಬವು ಯೋಜನೆಯ ವೆಚ್ಚವನ್ನು ಹೆಚ್ಚಿಸುವ ಅಪಾಯವನ್ನೂ ತಂದೊಡ್ಡಿದೆ.
ವಿಧಾನಸಭೆಯಲ್ಲಿ ಜೆಜೆಎಂ ಕಾರ್ಯನಿರ್ವಹಣೆ ಸಂಬಂಧ ಸಿಎಜಿ ವರದಿ ಮಂಡನೆ ಮಾಡಲಾಯಿತು. 2019ರಿಂದ 2024ರ ಅವಧಿಯ ಯೋಜನೆ ಕಾರ್ಯನಿರ್ವಹಣೆ ಬಗ್ಗೆ ಸಿಎಜಿ ವರದಿ ನೀಡಿದೆ. 2024ರ ನವೆಂಬರ್ ವೇಳೆಗೆ 72.14 ಲಕ್ಷ ಮನೆಗಳಿಗೆ ನಲ್ಲಿ ನೀರು ಒದಗಿಸುವ ಗುರಿ ಇತ್ತು. ಆದರೆ ಇನ್ನೂ 24.52 ಲಕ್ಷ ಮನೆಗಳಿಗೆ ಯೋಜನೆ ತಲುಪಿಲ್ಲ. ಟೆಂಡರ್ ಕರೆಯುವಲ್ಲಿನ ವಿಳಂಬ, ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಿಕೊಡದೇ ಇರುವುದು, ಭೂ ಸ್ವಾಧೀನ ಮತ್ತು ಮಂಜೂರಾತಿ ಪಡೆದುಕೊಳ್ಳುವಲ್ಲಿನ ವಿಳಂಬ, ಡಿಪಿಆರ್ಗಳ ಕೊರತೆ ಯೋಜನೆ ಹಿನ್ನಡೆಗೆ ಕಾರಣ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.
ಬಿಡುಗೆಯಾಗಿದ್ದ ಕೇಂದ್ರದ ನಿಧಿ ಹಣವನ್ನು ಬಳಸಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ 24,819.48 ಕೋಟಿ ಪೈಕಿ, ಕರ್ನಾಟಕ ಕೇವಲ 11,189 ಕೋಟಿ ಪಡೆದುಕೊಂಡಿತು. ಆರಂಭದಲ್ಲಿ (2019-20) ನಿಧಿಯ ಬಳಕೆ ಶೇ.50ರಷ್ಟಿತ್ತು. 2024ರ ವೇಳೆಗೆ ಇದು ಕೇವಲ ಶೇ 2ಕ್ಕೆ ಇಳಿದಿತ್ತು. ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಹಂತಗಳಲ್ಲಿ ನೀರಿನ ಗುಣಮಟ್ಟದ ಪರೀಕ್ಷೆಯಲ್ಲಿ ಕೊರತೆಯಿತ್ತು. ಮೇಲ್ವಿಚಾರಣೆಯಲ್ಲೂ ವಿಫಲತೆ ಕಂಡು ಬಂದಿತ್ತು ಎಂದು ವರದಿ ತಿಳಿಸಿದೆ.








