ಬೀದರ್ : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೀಳಿಗೆ ಇದೀಗ ಮತ್ತೊಂದು ಬಲಿಯಾಗಿದೆ. ಆನ್ಲೈನ್ ಗೇಮ್ ಚಟಕ್ಕೆ ಬಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸುಮಾರು 80 ಸಾವಿರ ರೂ. ಕಳೆದುಕೊಂಡ ಕಾರಣ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ನ ಬ್ರಿಮ್ಸ್ ವೈದ್ಯಕೀಯ ಕಾಲೇಜು ವಸತಿ ನಿಲಯದಲ್ಲಿ ನಡೆದಿದೆ.
ಅನಿಷ್ಕಾರ್ ಚವ್ಹಾಣ್ (21 ವ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ.ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ್ ತಾಂಡಾದ ನಿವಾಸಿ ಅನಿಷ್ಕಾರ್ ಅಂತಿಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ವಸತಿ ನಿಲಯದ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆನ್ಲೈನ್ ಗೇಮ್ ನಿಂದ ಹಣ ಕಳೆದುಕೊಂಡಿದಕ್ಕೆ ವಿದ್ಯಾರ್ಥಿ ಅನಿಷ್ಕಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಪೋಷಕರು ದೂರು ಸಲ್ಲಿಸಲಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಮಾಡಲಾಗುವುದು ಎಂದ ಎಸ್ಪಿ ಪ್ರದೀಪ್ ಹೇಳಿದರು.








