ಬೆಂಗಳೂರು : ಕಳೆದ ವರ್ಷ ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಅನಿರೀಕ್ಷಿತ ಕಾಲ್ತುಳಿತದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಕ್ರೀಡಾಭಿಮಾನಿಗಳಿಗೆ ಮಂಡಳಿಯು ಅತ್ಯಂತ ಭಾವನಾತ್ಮಕವಾಗಿ ಗೌರವ ಸಲ್ಲಿಸಲು ನಿರ್ಧರಿಸಿದೆ. ಈ ಘಟನೆಯಲ್ಲಿ ಮೃತಪಟ್ಟ 11 ಮಂದಿ ಅಭಿಮಾನಿಗಳ ನೆನಪನ್ನು ಶಾಶ್ವತವಾಗಿಸಲು ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.
ಪಂದ್ಯಕ್ಕೂ ಮುನ್ನ ಮೌನಾಚರಣೆ
ಟೂರ್ನಿಯ ಉದ್ಘಾಟನಾ ಪಂದ್ಯದ ಆರಂಭಕ್ಕೂ ಮುನ್ನ, ಮೃತಪಟ್ಟ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ರೀಡಾಂಗಣದಲ್ಲಿರುವ ಎಲ್ಲಾ ಆಟಗಾರರು, ಅಧಿಕಾರಿಗಳು ಮತ್ತು ಪ್ರೇಕ್ಷಕರು ಒಂದು ನಿಮಿಷದ ಮೌನಾಚರಣೆ ಮಾಡಲಿದ್ದಾರೆ. ಮೈದಾನದ ದೊಡ್ಡ ಪರದೆಯ ಮೇಲೆ ಮೃತಪಟ್ಟವರ ಭಾವಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಅರ್ಪಿಸಲಾಗುವುದು.
ಮೈದಾನದ 11 ಆಸನಗಳು ಮೃತರ ಸ್ಮರಣಾರ್ಥ ಮೀಸಲು:
ಶನಿವಾರ ಆರಂಭವಾಗಲಿರುವ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಮೃತ 11 ಅಭಿಮಾನಿಗಳ ಹೆಸರನ್ನು ಪರದೆಯ ಮೇಲೆ ಪ್ರದರ್ಶಿಸಿ, ಎರಡೂ ತಂಡಗಳ ಆಟಗಾರರು ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಅಲ್ಲದೆ ಮೃತರಿಗೆ ಗೌರವಾರ್ಥವಾಗಿ ಕ್ರೀಡಾಂಗಣದ ಪ್ರೀಮಿಯಂ ಸ್ಟ್ಯಾಂಡ್ನಲ್ಲಿನ 11 ಆಸನಗಳನ್ನು ಶಾಶ್ವತವಾಗಿ ಕಾಯ್ದಿರಿಸಲು ನಿರ್ಧರಿಸಲಾಗಿದೆ. ಗೌರವದ ಸಂಕೇತವಾಗಿ ಈ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲಾಗುತ್ತದೆ. ಅಲ್ಲದೇ, ಆ ಆಸನಗಳನ್ನು ಐಪಿಎಲ್ ಸೇರಿದಂತೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳ ಸಂದರ್ಭದಲ್ಲಿ ಮಾರಾಟ ಮಾಡಲಾಗುವುದಿಲ್ಲ.








