ಬೆಳಗಾವಿ: ಆರ್ಥಿಕ ಸಂಕಷ್ಟ ಹಾಗೂ ಗ್ಯಾಸ್ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮ ಸ್ಥಗಿತಗೊಂಡಿದ್ದರಿಂದ ಮನನೊಂದ ಹೋಟೆಲ್ ಮಾಲೀಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ‘ಹನುಮಾನ್ ಹೋಟೆಲ್’ ನಡೆಸುತ್ತಿದ್ದ ರಾಮು ಹಳ್ಳೂರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಕಳೆದ ಹಲವು ವರ್ಷಗಳಿಂದ ಹೋಟೆಲ್ ಉದ್ಯಮದ ಮೂಲಕ ಜೀವನ ಸಾಗಿಸುತ್ತಿದ್ದರು.
ಸಕಾಲಕ್ಕೆ ಗ್ಯಾಸ್ ಸಿಲಿಂಡರ್ ಲಭ್ಯವಾಗದ ಕಾರಣ ಕಳೆದ ಕೆಲವು ದಿನಗಳಿಂದ ಹೋಟೆಲ್ ವಹಿವಾಟು ಸ್ಥಗಿತಗೊಂಡಿತ್ತು ಎನ್ನಲಾಗಿದೆ. ಹೋಟೆಲ್ ವ್ಯವಹಾರಕ್ಕಾಗಿ ರಾಮು ಅವರು ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಸಾಲ ಪಡೆದಿದ್ದರು.
ಮಾರ್ಚ್ ತಿಂಗಳ ಅಂತ್ಯ ಸಮೀಪಿಸುತ್ತಿದ್ದಂತೆ ಸಾಲದ ಬಡ್ಡಿ ಪಾವತಿಸಬೇಕಾದ ಅನಿವಾರ್ಯತೆ ಇತ್ತು. ಹೋಟೆಲ್ ಬಂದ್ ಆಗಿದ್ದರಿಂದ ಹಣ ಹೊಂದಿಸಲು ಸಾಧ್ಯವಾಗದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








