ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಪಂದ್ಯಗಳ ಗುಣಮಟ್ಟ ಮತ್ತು ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಅತ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆಯ ನಿಯಮಗಳನ್ನು ಹೊರಡಿಸಿದೆ. ಈ ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಪಂದ್ಯ ನಡೆಯುವ ದಿನದಂದು ಮೈದಾನದಲ್ಲಿ ಯಾವುದೇ ರೀತಿಯ ಅಭ್ಯಾಸ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಿಚ್‌ಗಳ ಗುಣಮಟ್ಟವನ್ನು ಕಾಪಾಡುವುದು ಮತ್ತು ಆಟಗಾರರ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ತಡೆಯುವುದು ಈ ಬದಲಾವಣೆಯ ಮುಖ್ಯ ಉದ್ದೇಶವಾಗಿದೆ.
ಪಂದ್ಯದ ದಿನ ನೋ ಪ್ರಾಕ್ಟೀಸ್: ಪಂದ್ಯ ನಡೆಯುವ ದಿನದಂದು ಮುಖ್ಯ ಮೈದಾನದಲ್ಲಿ (Main Square) ಯಾವುದೇ ತಂಡಗಳು ನೆಟ್ ಪ್ರಾಕ್ಟೀಸ್ ಅಥವಾ ಫಿಟ್ನೆಸ್ ಪರೀಕ್ಷೆಗಳನ್ನು ನಡೆಸುವಂತಿಲ್ಲ.
ನೆಟ್ಸ್ ಹಂಚಿಕೊಳ್ಳುವಂತಿಲ್ಲ: ಒಂದು ತಂಡವು ಅಭ್ಯಾಸ ಮುಗಿಸಿದ ನಂತರ, ಅದೇ ನೆಟ್ಸ್ ಅಥವಾ ಪಿಚ್ ಅನ್ನು ಎದುರಾಳಿ ತಂಡವು ಬಳಸುವಂತಿಲ್ಲ. ಪ್ರತಿ ತಂಡಕ್ಕೂ ಪ್ರತ್ಯೇಕವಾಗಿ ‘ಫ್ರೆಶ್ ನೆಟ್ಸ್’ ಸಿದ್ಧಪಡಿಸಿಕೊಡುವುದು ಕಡ್ಡಾಯ.
ಅಭ್ಯಾಸ ಪಂದ್ಯಗಳಿಗೆ ಮಿತಿ: ಪ್ರತಿ ಫ್ರಾಂಚೈಸಿಯು ಟೂರ್ನಿ ಆರಂಭಕ್ಕೂ ಮುನ್ನ ಗರಿಷ್ಠ 2 ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡಬಹುದು. ಇದಕ್ಕೆ ಬಿಸಿಸಿಐನಿಂದ ಮುಂಚಿತವಾಗಿ ಅನುಮತಿ ಪಡೆಯಬೇಕು ಮತ್ತು ಈ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ಇರಬಾರದು.
ಮುಖ್ಯ ಮೈದಾನಕ್ಕೆ ಪ್ರವೇಶ ನಿರ್ಬಂಧ: ಯಾವುದೇ ತಂಡವು ತನ್ನ ಮೊದಲ ತವರು ಪಂದ್ಯಕ್ಕೆ (Home Match) 4 ದಿನ ಮುಂಚಿತವಾಗಿ ಮುಖ್ಯ ಪಿಚ್ ಮೇಲೆ ಅಭ್ಯಾಸ ನಡೆಸುವಂತಿಲ್ಲ.
ಪ್ರಯಾಣ ಮತ್ತು ಭದ್ರತೆ: ಅಭ್ಯಾಸಕ್ಕೆ ಬರುವಾಗ ಆಟಗಾರರು ಕಡ್ಡಾಯವಾಗಿ ತಂಡದ ಬಸ್ ಬಳಸಬೇಕು. ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನಕ್ಕೆ ಮಾನ್ಯತೆ ಪಡೆದ ಸಿಬ್ಬಂದಿ ಹೊರತುಪಡಿಸಿ ಕುಟುಂಬದ ಸದಸ್ಯರು ಅಥವಾ ಸ್ನೇಹಿತರಿಗೆ ಪ್ರವೇಶವಿರುವುದಿಲ್ಲ.








