ನವದೆಹಲಿ:ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಿಳಿಗೊಳಿಸಲು ಪಾಕಿಸ್ತಾನವು ಮಧ್ಯಸ್ಥಿಕೆ ವಹಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಎದುರಾದ “ಭಾರಿ ಹಿನ್ನಡೆ” ಎಂದು ಕಾಂಗ್ರೆಸ್ ಬಣ್ಣಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ: ಜಾಗತಿಕವಾಗಿ ಪ್ರಭಾವಿ ರಾಷ್ಟ್ರ ಎಂದು ಕರೆಸಿಕೊಳ್ಳುವ ಭಾರತವು ಪಶ್ಚಿಮ ಏಷ್ಯಾದಂತಹ ಸೂಕ್ಷ್ಮ ಪ್ರದೇಶದಲ್ಲಿ ಸಂಧಾನ ನಡೆಸುವ ಬದಲು, ಆರ್ಥಿಕವಾಗಿ ಹೈರಾಣಾಗಿರುವ ಪಾಕಿಸ್ತಾನಕ್ಕೆ ಆ ಅವಕಾಶ ಸಿಕ್ಕಿರುವುದು ಭಾರತದ ರಾಜತಾಂತ್ರಿಕ ವೈಫಲ್ಯವನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಪಶ್ಚಿಮ ಏಷ್ಯಾದಲ್ಲಿ ಲಕ್ಷಾಂತರ ಭಾರತೀಯರು ನೆಲೆಸಿದ್ದಾರೆ ಮತ್ತು ಭಾರತದ ಇಂಧನ ಭದ್ರತೆ ಈ ಪ್ರದೇಶದ ಮೇಲೆ ಅವಲಂಬಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದಂತಹ ರಾಷ್ಟ್ರವು ಮಧ್ಯಸ್ಥಿಕೆ ವಹಿಸುವುದು ಭಾರತದ ಹಿತಾಸಕ್ತಿಗೆ ಮಾರಕವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಳ್ಳುವ ಸರ್ಕಾರ, ಈ ಬಿಕ್ಕಟ್ಟಿನ ಸಮಯದಲ್ಲಿ ಭಾರತವನ್ನು ನಿರ್ಣಾಯಕ ಪಾತ್ರದಿಂದ ದೂರವಿಟ್ಟಿರುವುದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.







