ಬೆಂಗಳೂರು: ರಾಜ್ಯ ಸರ್ಕಾರದ ಇತರ ಇಲಾಖೆಗಳು ಒಪ್ಪಿಗೆ ನೀಡಿದರೆ, ಮೊದಲಿನಂತೆ ಎಲ್ಲಾ ಕಟ್ಟಡಗಳಿಗೂ ಓಸಿ (Occupancy Certificate) ಮತ್ತು ಸಿಸಿ (Completion Certificate) ಇಲ್ಲದೆಯೇ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ವಿಧಾನ ಪರಿಷತ್ತಿನಲ್ಲಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಡಾ. ಎಂ.ಜಿ. ಮುಳೆ ಅವರು ಸ್ಮಾರ್ಟ್ ಮೀಟರ್ ಅಳವಡಿಕೆ ಹಾಗೂ ಹೊಸ ವಿದ್ಯುತ್ ಸಂಪರ್ಕಕ್ಕೆ ವಿಧಿಸಲಾಗಿರುವ ಕಠಿಣ ಷರತ್ತುಗಳ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು ಈ ಹಿಂದೆ ಓಸಿ ಮತ್ತು ಸಿಸಿ ಇಲ್ಲದೆಯೇ ವಿದ್ಯುತ್ ಸಂಪರ್ಕ ನೀಡಲಾಗುತ್ತಿತ್ತು. ಆದರೆ, ಸುಪ್ರೀಂ ಕೋರ್ಟ್ ಆದೇಶದ ನಂತರ ಕೆಇಆರ್ಸಿ (KERC) ಸೂಚನೆ ನೀಡಿದ್ದು, ಓಸಿ-ಸಿಸಿ ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂದು ತಿಳಿಸಿದೆ. ಆದ್ದರಿಂದ ಪ್ರಸ್ತುತ ನಿಯಮ ಪಾಲನೆ ಮಾಡಲಾಗುತ್ತಿದೆ.
ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಈಗಾಗಲೇ 40/60 ಅಳತೆಯ ಎರಡು ಮಹಡಿಯ ಕಟ್ಟಡಗಳಿಗೆ ಓಸಿ, ಸಿಸಿ ವಿನಾಯಿತಿ ನೀಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದಿದೆ.
ವಿಸ್ತರಣೆಯ ಭರವಸೆ
ಇದೇ ಮಾದರಿಯಲ್ಲಿ ಎಲ್ಲಾ ಕಟ್ಟಡಗಳಿಗೂ ಸಂಬಂಧಪಟ್ಟ ಇಲಾಖೆಗಳು ವಿನಾಯಿತಿ ನೀಡಿದರೆ, ಮೊದಲಿನಂತೆ ಸುಲಭವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಇಂಧನ ಇಲಾಖೆ ಸಿದ್ಧವಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.








