ನವದೆಹಲಿ: ದೇಶದಲ್ಲಿ ಅಡುಗೆ ಅನಿಲದ (LPG) ಪ್ರಮಾಣವನ್ನು ಕಡಿತಗೊಳಿಸಲಾಗುತ್ತಿದೆ ಎಂಬ ವದಂತಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ತೆರೆ ಎಳೆದಿದೆ. ಸದ್ಯ ಬಳಕೆಯಲ್ಲಿರುವ 14.2 ಕೆಜಿ ಸಿಲಿಂಡರ್ ಬದಲಿಗೆ ಕೇವಲ 10 ಕೆಜಿ ಗ್ಯಾಸ್ ಮಾತ್ರ ಪೂರೈಸಲಾಗುತ್ತದೆ ಎಂಬ ಸುದ್ದಿಯು ಸಂಪೂರ್ಣ ಸುಳ್ಳು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್‌ಪಿಜಿ ಕೊರತೆಯಾಗಬಹುದು ಎಂಬ ಆತಂಕವಿತ್ತು. ಈ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೆಚ್ಚಿನ ಮನೆಗಳಿಗೆ ಗ್ಯಾಸ್ ತಲುಪಿಸಲು ಸಿಲಿಂಡರ್ ತೂಕವನ್ನು 10 ಕೆಜಿಗೆ ಇಳಿಸಲು ಚಿಂತನೆ ನಡೆಸುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.
ಸಚಿವಾಲಯದ ಸ್ಪಷ್ಟನೆ:
ಈ ವದಂತಿಯನ್ನು ತಳ್ಳಿಹಾಕಿರುವ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದ್ದಾರೆ. ಸಿಲಿಂಡರ್ ತೂಕ ಇಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ.ಇದೆಲ್ಲವೂ ಕೇವಲ ಊಹಾಪೋಹ ಮತ್ತು ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅವರು ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.
ಸಾಮಾನ್ಯವಾಗಿ 14.2 ಕೆಜಿಯ ಒಂದು ಸಿಲಿಂಡರ್ 35-40 ದಿನಗಳವರೆಗೆ ಬರುತ್ತದೆ. ಒಂದು ವೇಳೆ ಇದನ್ನು 10 ಕೆಜಿಗೆ ಇಳಿಸಿದರೆ ಅನಿಲ ಉಳಿತಾಯವಾಗಿ ಹೆಚ್ಚಿನ ಜನರಿಗೆ ತಲುಪಿಸಬಹುದು ಎಂಬ ಚರ್ಚೆಗಳು ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಆದರೆ ಈಗ ಕೇಂದ್ರ ಸರ್ಕಾರವು ಇದನ್ನು ಅಧಿಕೃತವಾಗಿ ನಿರಾಕರಿಸಿದೆ.








