ಬೆಂಗಳೂರು: ಅಂತರ್ಜಾತಿ ವಿವಾಹದ ಸಂದರ್ಭದಲ್ಲಿ ನಡೆಯುವ ‘ಮರ್ಯಾದೆ ಗೇಡು’ (ಗೌರವ ಹತ್ಯೆ), ದೈಹಿಕ ಹಲ್ಲೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಘಟನೆಗಳನ್ನು ತಡೆಯಲು ರೂಪಿಸಲಾಗಿರುವ ಮಹತ್ವದ ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ಈ ವಿಧೇಯಕಕ್ಕೆ ‘ಕರ್ನಾಟಕ ವಿವಾಹದಲ್ಲಿ ಆಯ್ಕೆಯ ಸ್ವಾತಂತ್ರ್ಯ ಹಾಗೂ ಮರ್ಯಾದೆ ಮತ್ತು ಸಂಪ್ರದಾಯದ ಹೆಸರಿನಲ್ಲಿನ ಅಪರಾಧಗಳ ಪ್ರತಿಬಂಧಕ ಮತ್ತು ನಿಷೇಧ (ಇವ ನಮ್ಮವ ಇವ ನಮ್ಮವ) ವಿಧೇಯಕ-2026’ ಎಂದು ಹೆಸರಿಸಲಾಗಿದೆ.
ವಿಧೇಯಕದ ಉದ್ದೇಶ
ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ವಿವಾಹದ ಹಕ್ಕನ್ನು ಉಲ್ಲಂಘಿಸಿ ಹಿಂಸೆ ನೀಡುವುದು, ಬೆದರಿಕೆ ಹಾಕುವುದು ಹಾಗೂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವುದನ್ನು ಈ ಕಾನೂನಿನ ಮೂಲಕ ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲಾಗುತ್ತದೆ.
ಮಸೂದೆಯನ್ನು ಮಂಡಿಸಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು, “12ನೇ ಶತಮಾನದಲ್ಲಿ ಬಸವಣ್ಣನವರು ‘ಇವನಾರವ ಇವನಾರವ ಎನ್ನದಿರಿ, ಇವ ನಮ್ಮವ ಇವ ನಮ್ಮವ ಎಂದೆನಿಸಿರಿ’ ಎಂದು ಹೇಳಿದ್ದರು. ಆದರೆ ಇಂದಿಗೂ ಸಮಾಜದಲ್ಲಿ ತಾರತಮ್ಯ ಮುಂದುವರಿದಿದೆ. ಇದನ್ನು ಹೋಗಲಾಡಿಸಲು ಈ ವಿಧೇಯಕ ಅನಿವಾರ್ಯ” ಎಂದರು.
ಮರ್ಯಾದೆ ಗೇಡು ಹತ್ಯೆಗೆ ಕುಮ್ಮಕ್ಕು ನೀಡುವವರು ಮತ್ತು ಅದಕ್ಕೆ ಕಾರಣರಾಗುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಮದುವೆಯಾಗಲು ಇಚ್ಛಿಸುವವರು ತಮ್ಮ ವಯಸ್ಸು ಮತ್ತು ಪರಸ್ಪರ ಒಪ್ಪಿಗೆಯನ್ನು ದೃಢೀಕರಿಸಿ ಡಿಸಿ ಅಥವಾ ಅವರ ಪ್ರತಿನಿಧಿಯ ಮುಂದೆ ಅರ್ಜಿ ಸಲ್ಲಿಸಬಹುದು.








