ಬೆಂಗಳೂರು: ರಾಜ್ಯದಲ್ಲಿ ಅಡುಗೆ ಅನಿಲದ ಕೊರತೆ ಮತ್ತು ಕಾಳಸಂತೆ ಮಾರಾಟವನ್ನು ತಡೆಗಟ್ಟಲು ವಾಣಿಜ್ಯ ಬಳಕೆಯ ಸಿಲಿಂಡರ್ ಪಡೆಯುವವರು ಇನ್ನು ಮುಂದೆ ಕಡ್ಡಾಯವಾಗಿ ಗೇಲ್ (GAIL) ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ನೋಂದಣಿ ಕಡ್ಡಾಯ
ಕಾಳಸಂತೆ ಮಾರಾಟ ತಡೆಯಲು ಎಲ್ಲಾ ವಾಣಿಜ್ಯ ಬಳಕೆದಾರರು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್) ಮೂಲಕ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಪತ್ರ ಬರೆದ ಹಿನ್ನೆಲೆಯಲ್ಲಿ, ವಾಣಿಜ್ಯ ಬಳಕೆದಾರರ ದೈನಂದಿನ ಬೇಡಿಕೆಯಲ್ಲಿ ಶೇ. 20ರಷ್ಟು ಸಿಲಿಂಡರ್ ಪೂರೈಸಲು ಕೇಂದ್ರ ಒಪ್ಪಿಗೆ ನೀಡಿದೆ ಎಂದರು.
ಸಿಲಿಂಡರ್ ಹಂಚಿಕೆ ವಿವರ:
ಪ್ರತಿದಿನ ಶಿಕ್ಷಣ ಸಂಸ್ಥೆಗಳಿಗೆ: 4,200
ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಿಗೆ: 1,200
ಕೃಷಿ ಸಂಬಂಧಿತ ಬಳಕೆದಾರರಿಗೆ: 500
ಹೋಟೆಲ್ ಸೇರಿದಂತೆ ಇತರ ವಾಣಿಜ್ಯ ಉದ್ದೇಶಗಳಿಗೆ: 10,000
ತುರ್ತು ಪರಿಸ್ಥಿತಿಗೆ ಮೀಸಲು: 205
ಒಟ್ಟು ಹಂಚಿಕೆ: 16,105 ಸಿಲಿಂಡರ್ಗಳು.
ಗೃಹ ಬಳಕೆಯ ಸಿಲಿಂಡರ್ ದುರುಪಯೋಗ: ವಾಣಿಜ್ಯ ಉದ್ದೇಶಗಳಿಗಾಗಿ ಗೃಹ ಬಳಕೆಯ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸುತ್ತಿದ್ದವರ ಮೇಲೆ ದಾಳಿ ನಡೆಸಲಾಗಿದ್ದು, ರಾಜ್ಯಾದ್ಯಂತ 1,448 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಒಟ್ಟು 25 ಎಫ್ಐಆರ್ (FIR) ದಾಖಲಿಸಲಾಗಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 507 ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದಂತೆ ಯಾದಗಿರಿ (100), ಬಾಗಲಕೋಟೆ (64), ಮೈಸೂರು (52) ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನೋಂದಣಿ ಪ್ರಕ್ರಿಯೆಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಿಕೊಳ್ಳಬೇಕೆಂದು ಸಚಿವರು ಬಳಕೆದಾರರಿಗೆ ಸೂಚನೆ ನೀಡಿದ್ದಾರೆ.








