ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇನ್ನು ಮುಂದೆ ವಿದ್ಯುನ್ಮಾನ ಮತಯಂತ್ರಗಳ (EVM) ಬದಲಿಗೆ ಹಳೆಯ ಮಾದರಿಯ ಮತಪತ್ರಗಳನ್ನು (Ballot Paper) ಬಳಸಲು ಅವಕಾಶ ನೀಡುವ ‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ವು ವಿಧಾನಸಭೆಯಲ್ಲಿ ತೀವ್ರ ಗದ್ದಲದ ನಡುವೆ ಅಂಗೀಕಾರಗೊಂಡಿದೆ.
ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ ಈ ವಿಧೇಯಕವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಯಿತು. ಮಸೂದೆಯನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ಸದನದಿಂದ ಹೊರನಡೆದರು.
ಸರ್ಕಾರದ ವಾದ: ಇವಿಎಂ ಮೇಲೆ ನಂಬಿಕೆ ಕುಂದುತ್ತಿದೆ
ಮಸೂದೆಯ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇವಿಎಂ ಪ್ರಕ್ರಿಯೆಯ ಬಗ್ಗೆ ದೇಶಾದ್ಯಂತ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಸಮರ್ಥಿಸಿಕೊಂಡರು.
-
ಮತದಾನದ ವ್ಯತ್ಯಾಸ: ಮಹಾರಾಷ್ಟ್ರ ಚುನಾವಣೆಯಲ್ಲಿ ಸಂಜೆ 5 ಗಂಟೆಗೆ ಶೇ. 58.22 ರಷ್ಟಿದ್ದ ಮತದಾನ ರಾತ್ರಿ ವೇಳೆಗೆ ಶೇ. 68.02 ಕ್ಕೆ ಏರಿಕೆಯಾಗಿದೆ. ಕೇವಲ 5 ಗಂಟೆಗಳಲ್ಲಿ 50 ಲಕ್ಷ ಮತಗಳು ಹೇಗೆ ಸೇರ್ಪಡೆಯಾದವು ಎಂದು ಅವರು ಪ್ರಶ್ನಿಸಿದರು.
-
ಚುನಾವಣಾ ಆಯೋಗದ ಮೌನ: ಹರಿಯಾಣ ಮತ್ತು ಮಧ್ಯಪ್ರದೇಶದಲ್ಲೂ ಇಂತಹ ಸಂಶಯಾಸ್ಪದ ಏರಿಕೆಗಳು ಕಂಡುಬಂದಿವೆ. ಈ ಬಗ್ಗೆ ಚುನಾವಣಾ ಆಯೋಗವು ಸಮರ್ಪಕ ಉತ್ತರ ನೀಡುತ್ತಿಲ್ಲ. ಹೀಗಾಗಿ ಪಾರದರ್ಶಕತೆಗಾಗಿ ಮತಪತ್ರದ ಮೊರೆ ಹೋಗುವುದು ಅನಿವಾರ್ಯ ಎಂದರು.
-
ಜಾಗತಿಕ ಮಾದರಿ: ಜರ್ಮನಿಯಂತಹ ಮುಂದುವರಿದ ದೇಶಗಳೇ ಇವಿಎಂ ಬಿಟ್ಟು ಮತ್ತೆ ಮತಪತ್ರಕ್ಕೆ ಮರಳಿವೆ ಎಂದು ಅವರು ಉದಾಹರಣೆ ನೀಡಿದರು.
ಪ್ರತಿಪಕ್ಷಗಳ ವಾಗ್ದಾಳಿ: “ಇದು ತುಘಲಕ್ ದರ್ಬಾರ್”
ಬಿಜೆಪಿ ನಾಯಕರು ಸರ್ಕಾರದ ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದು, ಇದು ರಾಜ್ಯವನ್ನು ಮತ್ತೆ ‘ಶಿಲಾಯುಗ’ಕ್ಕೆ ಕೊಂಡೊಯ್ಯುವ ಪ್ರಯತ್ನ ಎಂದು ಟೀಕಿಸಿದರು.
-
ಆರ್. ಅಶೋಕ್: ಇವಿಎಂ ತಂದಿದ್ದೇ ಕಾಂಗ್ರೆಸ್ ಸರ್ಕಾರ. ಈಗ ಸೋಲಿನ ಭೀತಿಯಿಂದ ಅದರ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಇವಿಎಂ ಬಳಕೆಯನ್ನು ಎತ್ತಿ ಹಿಡಿದಿದೆ. ಅಧಿಕಾರಿಗಳ ಮೇಲೆಯೇ ನಂಬಿಕೆ ಇಲ್ಲದ ಈ ಸರ್ಕಾರ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.
-
ಸುನಿಲ್ ಕುಮಾರ್: ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುವವರು ತಂತ್ರಜ್ಞಾನ ಬಿಟ್ಟು ಹಿಂದೆ ಹೋಗುತ್ತಿದ್ದಾರೆ. ಬೂತ್ ಕ್ಯಾಪ್ಚರಿಂಗ್ ಮತ್ತು ಮತಗಳ್ಳತನ ಮಾಡಲು ಸರ್ಕಾರ ಈ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
-
ಸುರೇಶ್ ಕುಮಾರ್: ಐಟಿ ಸಚಿವರೇ ಇಂತಹ ತಂತ್ರಜ್ಞಾನ ವಿರೋಧಿ ಮಸೂದೆ ತಂದಿರುವುದು ದ್ರೌರ್ಭಾಗ್ಯ. ಇದು ರಾಹುಲ್ ಗಾಂಧಿ ಅವರ ಹಿತಾಸಕ್ತಿ ಕಾಪಾಡಲು ತಂದ ಬಿಲ್ ಹೊರತು ಜನರಿಗಲ್ಲ ಎಂದರು.
-
ಅಶ್ವತ್ಥನಾರಾಯಣ: ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೂ ಮತದಾರರ ಹೆಸರು ಸೇರಿಸಲು ಅವಕಾಶ ನೀಡಿರುವುದು ಚುನಾವಣೆಯಲ್ಲಿ ಅಕ್ರಮ ಎಸಗುವ ಉದ್ದೇಶವನ್ನು ಹೊಂದಿದೆ ಎಂದು ದೂರಿದರು.
ಅಳಂದ ಮತಗಳ್ಳತನದ ಬಗ್ಗೆ ಕಿತ್ತಾಟ
ಸದನದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಳಂದದಲ್ಲಿ ಮತಗಳ್ಳತನ ಸಾಬೀತಾಗಿದೆ ಎಂದು ಹೇಳಿದಾಗ, ಅಶ್ವತ್ಥನಾರಾಯಣ ಅವರು ಸವಾಲು ಹಾಕಿದರು. “ಧೈರ್ಯವಿದ್ದರೆ ಆ ವರದಿಯನ್ನು ಸದನದಲ್ಲಿ ಮಂಡಿಸಿ, ಆಗ ನೀವೇ ಸಿಕ್ಕಿಹಾಕಿಕೊಳ್ಳುತ್ತೀರಿ” ಎಂದು ಸವಾಲು ಹಾಕಿದರು. ಇದಕ್ಕೆ ಉತ್ತರಿಸಿದ ಖರ್ಗೆ, “ಈಗಾಗಲೇ 22,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಎ1 ಮತ್ತು ಎ2 ಆರೋಪಿಗಳಾಗಿ ಬಿಜೆಪಿ ಅಭ್ಯರ್ಥಿಗಳೇ ಇದ್ದಾರೆ” ಎಂದು ತಿರುಗೇಟು ನೀಡಿದರು.
ಅಂತಿಮವಾಗಿ ಮಸೂದೆಯು ಅಂಗೀಕಾರವಾಯಿತು. ಆದರೆ, ಈ ಬದಲಾವಣೆಯು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.
EPFO ಮಾಸ್ಟರ್ ಪ್ಲಾನ್: 10,181 ಕೋಟಿ ರೂ. ಹಕ್ಕು ಪಡೆಯದ ಹಣ ಪಾವತಿಗೆ ‘ಆಟೋ-ಸೆಟಲ್ಮೆಂಟ್’ ಫೀಚರ್ ಜಾರಿ!








