ಶ್ರೀನಗರ: 2025ರ ನವೆಂಬರ್‌ನಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA), ಇಂದು (ಸೋಮವಾರ) ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಶ್ರೀನಗರ, ಬಾರಾಮುಲ್ಲಾ, ಕುಪ್ವಾರ ಮತ್ತು ಕುಲ್ಗಾಮ್ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಈ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಈ ಸ್ಫೋಟದ ಹಿಂದೆ ‘ವೈಟ್ ಕಾಲರ್’ ಭಯೋತ್ಪಾದನಾ ಜಾಲದ ಕೈವಾಡವಿರುವ ಶಂಕೆಯ ಮೇಲೆ ಎನ್‌ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಜಾಲಾಡುತ್ತಿದ್ದಾರೆ.
ಹಂದ್ವಾರದ ಗುಲೂರಾ ಪ್ರದೇಶದಲ್ಲಿರುವ ಪ್ರಮುಖ ಉದ್ಯಮಿಯೊಬ್ಬರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿ ಡಿಜಿಟಲ್ ಪುರಾವೆಗಳು ಮತ್ತು ಬ್ಯಾಂಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ 11 ಮಂದಿಯಲ್ಲಿ ಹಲವರು ವೈದ್ಯರಾಗಿದ್ದಾರೆ. ಬಾರಾಮುಲ್ಲಾದ ರಫಿಯಾಬಾದ್‌ನಲ್ಲಿರುವ ಡಾ. ಬಿಲಾಲ್ ನಾಸಿರ್ ಮಲ್ಲಾ ಅವರ ನಿವಾಸದಲ್ಲೂ ಇಂದು ತಪಾಸಣೆ ನಡೆಸಲಾಗಿದೆ. 2025ರ ನವೆಂಬರ್ 10ರಂದು ಕೆಂಪುಕೋಟೆ ಬಳಿ ಸ್ಫೋಟಕ ತುಂಬಿದ ಕಾರು ಸ್ಫೋಟಗೊಂಡು 13 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯ ಸಂಚು ರೂಪಿಸಿದ ‘ಅನ್ಸಾರ್ ಗಜ್ವತ್-ಉಲ್-ಹಿಂದ್’ (AGH) ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ನಂಟಿನ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ.
ದಾಳಿಯ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಕೆಲವು ಶಂಕಾಸ್ಪದ ಡೈರಿಗಳನ್ನು ಎನ್‌ಐಎ ವಶಕ್ಕೆ ಪಡೆದಿದೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು (Terror Funding) ನೀಡಿದ ಆರೋಪದ ಮೇಲೆ ಈ ದಾಳಿಗಳು ನಡೆಯುತ್ತಿವೆ.








