ತೇಜ್‌ಪುರ (ಅಸ್ಸಾಂ): ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಢೇಕಿಯಾಜುಲಿ ಬಳಿಯ ರಾಷ್ಟ್ರೀಯ ಹೆದ್ದಾರಿ-15ರಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದಾರೆ. ರೋಗಿಯೊಬ್ಬರನ್ನು ಹೊತ್ತು ಸಾಗುತ್ತಿದ್ದ ಆಂಬ್ಯುಲೆನ್ಸ್ ಮತ್ತು ವೇಗವಾಗಿ ಬಂದ ಟ್ರಕ್ ನಡುವೆ ಮುಖಾಮುಖಿ
ಡಿಕ್ಕಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಆಂಬ್ಯುಲೆನ್ಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತುಲಿಪ್ ಚಹಾ ಎಸ್ಟೇಟ್‌ಗೆ ಸೇರಿದ ಆಂಬ್ಯುಲೆನ್ಸ್ ಇದಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ತೇಜ್‌ಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (TMCH) ಕರೆದೊಯ್ಯಲಾಗುತ್ತಿತ್ತು. ಈ ವೇಳೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ರಬರ್ಟೋಲಾ-ಅಲಿಚಿಂಗಾ ಪ್ರದೇಶದಲ್ಲಿ ಅಪಘಾತ ನಡೆದಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ನಾಗಾಂವ್-ತೇಜ್‌ಪುರ ರಸ್ತೆಯ ಟೋಲ್ ಗೇಟ್‌ಗಳನ್ನು ತಪ್ಪಿಸಲು ಟ್ರಕ್ ಚಾಲಕ ಈ ಮಾರ್ಗವಾಗಿ ಬಂದಿದ್ದ ಎಂದು ಶಂಕಿಸಲಾಗಿದೆ. ಡಿಕ್ಕಿಯಾದ ಕೂಡಲೇ ಟ್ರಕ್ ಚಾಲಕ ಮತ್ತು ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಮೃತರನ್ನು ಆಂಬ್ಯುಲೆನ್ಸ್ ಚಾಲಕ ವಿಜಯ್ ಹನ್ಸಾ, ಹರಿ ಮಡ್ಗಿ, ಕುನಾಲ್ ಕರ್ಮಾಕರ್, ಸಂಜಿತಾ ನಾಥ್, ಬಿಸ್ವಜಿತ್ ನಾಥ್ ಮತ್ತು ಸಂಧ್ಯಾಚಾರಿ ನಾಥ್ ಎಂದು ಗುರುತಿಸಲಾಗಿದೆ. ಏಳನೇ ವ್ಯಕ್ತಿಯ ಗುರುತು ಪತ್ತೆಯಾಗಬೇಕಿದೆ.








