ನವದೆಹಲಿ: ದೇಶದ ಸಾಮಾನ್ಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ನಿತ್ಯ ಬಳಕೆಯ ಪ್ಯಾರಸಿಟಮಾಲ್ ಸೇರಿದಂತೆ ಸುಮಾರು 90ಕ್ಕೂ ಹೆಚ್ಚು ಸ್ಥಿರ ಡೋಸೇಜ್ ಕಾಂಬಿನೇಶನ್ (FDC) ಔಷಧಗಳ ಸ್ಯಾಂಪಲ್ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಇವುಗಳಿಗೆ ಅಧಿಕೃತ ಅನುಮೋದನೆ ಇಲ್ಲದಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) ಎಲ್ಲಾ ರಾಜ್ಯಗಳ ಔಷಧ ನಿಯಂತ್ರಕರಿಗೆ ಪತ್ರ ಬರೆದಿದ್ದು, ತಕ್ಷಣವೇ ಇವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.ಈ 90ಕ್ಕೂ ಹೆಚ್ಚು ಎಫ್ಡಿಸಿ (FDC) ಔಷಧಿಗಳು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಇವುಗಳಲ್ಲಿ ಪ್ಯಾರಸಿಟಮಾಲ್ ಮತ್ತು ಇತರ ನೋವು ನಿವಾರಕ ಹಾಗೂ ಜ್ವರದ ಮಾತ್ರೆಗಳ ಸ್ಯಾಂಪಲ್ಗಳು ಸೇರಿವೆ.
ಎರಡು ಅಥವಾ ಅದಕ್ಕಿಂತ ಹೆಚ್ಚು ಔಷಧೀಯ ಪದಾರ್ಥಗಳನ್ನು ಸೇರಿಸಿ ತಯಾರಿಸುವ ಒಂದು ಮಾತ್ರೆಯನ್ನು ‘ಸ್ಥಿರ ಡೋಸೇಜ್ ಕಾಂಬಿನೇಶನ್’ ಎನ್ನಲಾಗುತ್ತದೆ. ಈ ಸಂಯೋಜನೆಗಳಿಗೆ ವೈಜ್ಞಾನಿಕ ಆಧಾರ ಮತ್ತು ಸರ್ಕಾರದ ಅನುಮತಿ ಕಡ್ಡಾಯ.ಈ ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ದಾಸ್ತಾನು ವಶಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಅಸುರಕ್ಷಿತ ಅಥವಾ ಅನುಮೋದನೆ ಇಲ್ಲದ ಇಂತಹ ಔಷಧಿಗಳ ಸೇವನೆಯಿಂದ ಕಿಡ್ನಿ, ಯಕೃತ್ತು (Liver) ಹಾನಿಯಾಗುವ ಸಂಭವವಿರುತ್ತದೆ. ಆದ್ದರಿಂದ ಸಾರ್ವಜನಿಕರು ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ.








