ಬೆಂಗಳೂರು : ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ವಾಹನ ಪ್ರಯಾಣಿಕರಿಗೆ ಏಪ್ರಿಲ್ 1 ರಿಂದ ಟೋಲ್ ದರ ಏರಿಕೆ ಬಿಸಿ ತಟ್ಟಲಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಶೇಕಡಾ 3 ರಿಂದ 5 ರಷ್ಟು ದರ ಏರಿಕೆಯಾಗಲಿದೆ. ರಾಜ್ಯದ 9 ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳಿಗೂ ಅನ್ವಯವಾಗಲಿವೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ವೇ ಪ್ರಯಾಣ ಇನ್ನಷ್ಟು ದುಬಾರಿಯಾಗಲಿದೆ.
ಹೌದು ಏಪ್ರಿಲ್ 1 ರಿಂದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಹೆದ್ದಾರಿ ಸೇರಿದಂತೆ ರಾಜ್ಯದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ 3 ರಿಂದ ಶೇಕಡಾ 5ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಈ ಮೂಲಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ. ವಾರ್ಷಿಕ ಹಣದುಬ್ಬರ ಆಧಾರಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ 2008ರ ಅನ್ವಯ ಪ್ರತಿ ವರ್ಷ ಟೋಲ್‌ದರ ಶೇ.3 ರಿಂದ ಶೇ.5ರವರೆಗೆ ಹೆಚ್ಚಳ ಆಗಲಿದೆ. ಕಳೆದ ಎರಡು ವರ್ಷಗಳಿಂದ ಇದೇ ರೀತಿ ಟೋಲ್ ದರ ಏರಿಕೆಯಾಗಿತ್ತು.
ಈಗಾಗಲೇ ಎನ್‌ಎಚ್‌ಐಎ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ಫಾಸ್ಟ್‌ಟ್ಯಾಗ್ ಪಾಸ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಖಾಸಗಿ ಕಾರು, ಜೀಪ್, ವ್ಯಾನ್ ಸೇರಿದಂತೆ ವಾಣಿಜ್ಯೇತರ ವಾಹನ ಬಳಕೆ ಮಾಲೀಕರು ಇನ್ನು ಮುಂದೆ ವಾರ್ಷಿಕ ಪಾಸ್‌ಗಳನ್ನು 3000ರೂ. ಬದಲಿಗೆ, 3075 ರೂ.ಪಾವತಿಸಿ ಖರೀದಿಸಬೇಕಾಗಿದೆ. ಇದೀಗ ಪ್ರತಿ ವರ್ಷದಂತೆ ಈ ವರ್ಷವೂ ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಾಗಿರುವುದು ವಾಹನ ಸವಾರರಿಗೆ ಹೊರೆಯಾಗಲಿದೆ.








