ಟೆಹ್ರಾನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಸಂಘರ್ಷ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ತಲುಪಿದ್ದು, ಸೋಮವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ವಾಯುಪಡೆ ಭೀಕರ ದಾಳಿ ನಡೆಸಿದೆ. ಟೆಹ್ರಾನ್ನ ಕನಿಷ್ಠ ಐದು ಪ್ರಮುಖ ವಲಯಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿದ್ದು, ಇಡೀ ನಗರವು ಸರಣಿ ಸ್ಫೋಟಗಳ ಸದ್ದಿನಿಂದ ನಡುಗಿದೆ.
ಇರಾನ್ನ ಮೂಲಸೌಕರ್ಯಗಳನ್ನು ನಾಶಪಡಿಸಲು ಈ ‘ಬೃಹತ್ ಮಟ್ಟದ ವಾಯುದಾಳಿ’ ನಡೆಸುತ್ತಿರುವುದಾಗಿ ಇಸ್ರೇಲ್ ಸೇನೆ ಅಧಿಕೃತವಾಗಿ ಘೋಷಿಸಿದೆ.ಟೆಹ್ರಾನ್ನ ಅತ್ಯಂತ ಜನನಿಬಿಡ ಪ್ರದೇಶವಾದ ‘ಹಫೇಜ್-ಜೋಮ್ಹೂರಿ’ (Hafez-Jomhouri) ಚೌಕದ ಬಳಿ ಪ್ರಬಲ ಸ್ಫೋಟ ಸಂಭವಿಸಿದೆ. ಇಲ್ಲಿ ಸರ್ಕಾರಿ ಕಚೇರಿಗಳು ಮತ್ತು ವಾಣಿಜ್ಯ ಸಂಕೀರ್ಣಗಳಿದ್ದು, ಭಾರಿ ಹಾನಿಯಾದ ವರದಿಯಾಗಿದೆ.
ಪೂರ್ವ ಟೆಹ್ರಾನ್ನ ‘ಪೀರೂಜಿ’ (Piroozi) ಮತ್ತು ‘ರಿಸಾಲತ್’ (Risalat) ವಲಯಗಳಲ್ಲಿ ಕ್ಷಿಪಣಿಗಳು ಅಪ್ಪಳಿಸಿದ್ದು, ಹಲವಾರು ವಸತಿ ಕಟ್ಟಡಗಳು ನೆಲಸಮವಾಗಿವೆ. ಅವಶೇಷಗಳ ಅಡಿಯಲ್ಲಿ ಅನೇಕರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
“ಇರಾನ್ನ ಭಯೋತ್ಪಾದಕ ಆಡಳಿತದ ಮೂಲಸೌಕರ್ಯಗಳ ಮೇಲೆ ನಾವು ವ್ಯಾಪಕ ದಾಳಿ ಆರಂಭಿಸಿದ್ದೇವೆ” ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ. ಟೆಹ್ರಾನ್ ಮಾತ್ರವಲ್ಲದೆ ಕರಾಜ್, ಶಿರಾಜ್ ಮತ್ತು ಅಹ್ವಾಜ್ ನಗರಗಳಲ್ಲೂ ಸ್ಫೋಟದ ಸದ್ದು ಕೇಳಿಬಂದಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯನ್ನು ತೆರೆಯಲು ನೀಡಿದ್ದ 48 ಗಂಟೆಗಳ ಗಡುವು ಮುಗಿಯುವ ಮುನ್ನವೇ ಈ ದಾಳಿ ನಡೆದಿರುವುದು ಯುದ್ಧದ ಭೀತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ತನ್ನ ನೆಲದ ಮೇಲಿನ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಯುಎಇ (ಅಬುಧಾಬಿ) ಮತ್ತು ಸೌದಿ ಅರೇಬಿಯಾದತ್ತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಇವುಗಳನ್ನು ಆಯಾ ದೇಶಗಳ ವಾಯು ರಕ್ಷಣಾ ವ್ಯವಸ್ಥೆಗಳು ತಡೆದಿವೆ ಎಂದು ವರದಿಯಾಗಿದೆ.








