ಮುಂಬೈ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಭೀತಿ ಹಾಗೂ ಹಾರ್ಮುಜ್ ಜಲಸಂಧಿಯ ಸಂಘರ್ಷದಿಂದಾಗಿ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಭಾರಿ ಕುಸಿತಕ್ಕೆ ಸಾಕ್ಷಿಯಾಗಿದೆ. ಆರಂಭಿಕ ವಹಿವಾಟಿನಲ್ಲೇ ಬಿಎಸ್‌ಇ (BSE) ಸೆನ್ಸೆಕ್ಸ್ ಸುಮಾರು 1,400ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದರೆ, ಎನ್‌ಎಸ್‌ಇ (NSE) ನಿಫ್ಟಿ ಶೇ. 2ರಷ್ಟು ಇಳಿಕೆ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದು ಮತ್ತು ವಿದೇಶಿ ಹೂಡಿಕೆದಾರರು ಸತತವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಈ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಸೆನ್ಸೆಕ್ಸ್ ಸುಮಾರು 1,555 ಪಾಯಿಂಟ್ಸ್ ಕುಸಿದು 72,977 ಮಟ್ಟಕ್ಕೆ ತಲುಪಿದರೆ, ನಿಫ್ಟಿ 480 ಪಾಯಿಂಟ್ಸ್ ಇಳಿಕೆಯಾಗಿ 22,634 ಮಟ್ಟಕ್ಕೆ ಕುಸಿಯಿತು. ಈ ಒಂದೇ ದಿನದ ಕುಸಿತದಿಂದಾಗಿ ಹೂಡಿಕೆದಾರರ ಅಂದಾಜು 5 ಲಕ್ಷ ಕೋಟಿ ರೂಪಾಯಿ ಸಂಪತ್ತು ಮಣ್ಣು ಪಾಲಾಗಿದೆ.
ತೈಲ ಬೆಲೆ ಏರಿಕೆ ಭೀತಿ: ಹಾರ್ಮುಜ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯ ಉಂಟಾಗುವ ಭೀತಿಯಿಂದ ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 113 ಡಾಲರ್ ದಾಟಿದೆ. ಇದು ಭಾರತದಂತಹ ಆಮದು ಅವಲಂಬಿತ ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಆತಂಕ ಹೂಡಿಕೆದಾರರಲ್ಲಿದೆ.
ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು 93.84 ಮಟ್ಟಕ್ಕೆ ತಲುಪಿದೆ. ಇದು ಕೂಡ ಮಾರುಕಟ್ಟೆಯ ಮೇಲೆ ಒತ್ತಡ ಹೇರಿದೆ.








