ಅಬುಧಾಬಿ: ಇರಾನ್‌ನಿಂದ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದೆ. ಆದರೆ, ಕ್ಷಿಪಣಿಯ ಅವಶೇಷಗಳು ಅಬುಧಾಬಿಯ ‘ಅಲ್ ಶವಾಮೆಖ್’ (Al Shawamekh) ಪ್ರದೇಶದಲ್ಲಿ ಬಿದ್ದ ಪರಿಣಾಮವಾಗಿ ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ.
ಅಮೆರಿಕ-ಇರಾನ್ ನಡುವಿನ ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈ ಭಾಗದಲ್ಲಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ತೀವ್ರಗೊಂಡಿವೆ.
ಅಲ್ ಶವಾಮೆಖ್ ಪ್ರದೇಶದ ವಸತಿ ಸಂಕೀರ್ಣದ ಬಳಿ ಕ್ಷಿಪಣಿಯ ಚೂರುಗಳು ಬಿದ್ದಿವೆ. ಇದರಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಬುಧಾಬಿ ಮೀಡಿಯಾ ಆಫೀಸ್ ಖಚಿತಪಡಿಸಿದೆ.
ಭಾನುವಾರ ತಡರಾತ್ರಿ ಇರಾನ್ ಕಡೆಯಿಂದ ಬಂದ 4 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 25 ಮಾನವರಹಿತ ಡ್ರೋನ್‌ಗಳನ್ನು (UAVs) ಯುಎಇ ಸೇನೆಯು ಮಧ್ಯದಲ್ಲೇ ಹೊಡೆದುರುಳಿಸಿದೆ.
ಈ ಸಂಘರ್ಷದ ಆರಂಭದಿಂದ ಇಲ್ಲಿಯವರೆಗೆ ಪಶ್ಚಿಮ ಏಷ್ಯಾದಲ್ಲಿ ಸುಮಾರು 6 ಭಾರತೀಯರು ಜೀವ ಕಳೆದುಕೊಂಡಿದ್ದಾರೆ. ಒಮನ್, ಸೌದಿ ಅರೇಬಿಯಾ ಮತ್ತು ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಕಾರ್ಮಿಕರು ಈ ಯುದ್ಧದ ಬೇಗುದಿಗೆ ಸಿಲುಕಿದ್ದಾರೆ.ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹರಡದಂತೆ ಮತ್ತು ಕೇವಲ ಸರ್ಕಾರಿ ಮೂಲಗಳ ಮಾಹಿತಿಯನ್ನು ಮಾತ್ರ ನಂಬುವಂತೆ ಯುಎಇ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.








