ಕರಾಚಿ: ಪಾಕಿಸ್ತಾನದ ವಾಣಿಜ್ಯ ನಗರಿ ಕರಾಚಿಯಲ್ಲಿರುವ ಪ್ರಸಿದ್ಧ ‘ಗುಲ್ ಪ್ಲಾಜಾ’ (Gul Plaza) ಶಾಪಿಂಗ್ ಮಾಲ್‌ನಲ್ಲಿ ಭಾನುವಾರ ಸಂಜೆ ಮತ್ತೆ ಭೀಕರ ಬೆಂಕಿ ಕಾಣಿಸಿಕೊಂಡಿದೆ. ಸುಮಾರು ಎರಡು ತಿಂಗಳ ಹಿಂದೆಯಷ್ಟೇ ಇದೇ ಮಾಲ್‌ನಲ್ಲಿ ನಡೆದಿದ್ದ ಅಗ್ನಿ ದುರಂತದಲ್ಲಿ 80ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಆ ಕರಾಳ ನೆನಪು ಮಾಸುವ ಮುನ್ನವೇ ಅದೇ ಕಟ್ಟಡದಲ್ಲಿ ಮತ್ತೆ ಬೆಂಕಿ ಆವರಿಸಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಕಟ್ಟಡದ ನೆಲಮಾಳಿಗೆಯಲ್ಲಿ (Basement) ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಹರಡಿದ್ದು, ದಟ್ಟವಾದ ಹೊಗೆ ಆವರಿಸಿದೆ.ಮಾಲ್‌ನ ನೆಲಮಾಳಿಗೆಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಹಳೆಯ ವಸ್ತುಗಳ ರಾಶಿಗೆ ಬೆಂಕಿ ಬಿದ್ದಿದ್ದು, ಹತ್ತಿರದ ಅಂಗಡಿಗಳಿಗೂ ಹರಡಿದೆ. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮಾಲ್‌ನೊಳಗೆ ಅಕ್ರಮವಾಗಿ ನುಗ್ಗಿದ್ದ ಮಾದಕ ವ್ಯಸನಿಗಳು ತಾಮ್ರದ ತಂತಿಗಳನ್ನು ಕದಿಯುವ ಉದ್ದೇಶದಿಂದ ಬೆಂಕಿ ಹಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಜನವರಿ 17, 2026 ರಂದು ಇದೇ ಮಾಲ್‌ನಲ್ಲಿ ಸಂಭವಿಸಿದ್ದ ಭೀಕರ ಬೆಂಕಿಯಿಂದಾಗಿ 80 ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದರು ಮತ್ತು ನೂರಾರು ಅಂಗಡಿಗಳು ಸುಟ್ಟು ಭಸ್ಮವಾಗಿದ್ದವು. ಆ ದುರಂತದ ನಂತರ ಕಟ್ಟಡವನ್ನು ಸೀಲ್ ಮಾಡಲಾಗಿತ್ತು.ಈಗಾಗಲೇ ಮೊದಲಿನ ಬೆಂಕಿಯಿಂದಾಗಿ ಕಟ್ಟಡದ ಗೋಡೆಗಳು ಮತ್ತು ಪಿಲ್ಲರ್‌ಗಳು ಬಿರುಕು ಬಿಟ್ಟಿದ್ದು, ಈಗಿನ ಬೆಂಕಿ ಅವಘಡದಿಂದ ಕಟ್ಟಡ ಕುಸಿಯುವ ಭೀತಿ ಎದುರಾಗಿದೆ.








