ಟೆಹ್ರಾನ್: ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗಿನ ಮೇಲೆ ಇರಾನ್ 2 ಮಿಲಿಯನ್ ಡಾಲರ್ (ಸುಮಾರು 16.5 ಕೋಟಿ ರೂಪಾಯಿ) ‘ಟೋಲ್’ ಅಥವಾ ಸಂಚಾರ ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂಬ ಸುದ್ದಿಗಳು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿವೆ. ಈ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವರದಿಗಳಿಗೆ ಇರಾನ್ ಈಗ ಅಧಿಕೃತ ಪ್ರತಿಕ್ರಿಯೆ ನೀಡಿದೆ.
ಅಮೆರಿಕದೊಂದಿಗಿನ ಸಂಘರ್ಷದ ನಡುವೆ ಇರಾನ್ ಈ ನಿರ್ಧಾರ ಕೈಗೊಂಡರೆ ಜಾಗತಿಕ ತೈಲ ಬೆಲೆಗಳು ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆಯಾಗುವ ಭೀತಿ ಎದುರಾಗಿತ್ತು.ಇರಾನ್ನ ಬಂದರು ಮತ್ತು ಕಡಲ ಸಂಸ್ಥೆಯ ಅಧಿಕಾರಿಗಳು ಈ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ಹೊಸ ಅಥವಾ ಅತಿಯಾದ ಶುಲ್ಕವನ್ನು ವಿಧಿಸುವ ಅಧಿಕೃತ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇಂತಹ ಸುದ್ದಿಗಳು ಕೇವಲ ವದಂತಿಗಳು” ಎಂದು ಸ್ಪಷ್ಟಪಡಿಸಿದ್ದಾರೆ.
ಇರಾನ್ ಸಂಸತ್ತಿನ (ಮಜ್ಲಿಸ್) ಕೆಲವು ಸದಸ್ಯರು ಇತ್ತೀಚೆಗೆ “ಅಮೆರಿಕದ ದಿಗ್ಬಂಧನದಿಂದ ನಮಗಾಗುತ್ತಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಈ ಮಾರ್ಗದಲ್ಲಿ ಸಂಚರಿಸುವ ಹಡಗುಗಳಿಗೆ ಶುಲ್ಕ ವಿಧಿಸಬೇಕು” ಎಂಬ ಸಲಹೆ ನೀಡಿದ್ದರು. ಇದು ಜಾಗತಿಕವಾಗಿ ‘ಸಂಚಾರ ಸುಂಕ’ದ ಭೀತಿಯನ್ನು ಹುಟ್ಟುಹಾಕಿತ್ತು.
ಅಂತರಾಷ್ಟ್ರೀಯ ಕಡಲ ಕಾನೂನುಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಂತಹ ಆಯಕಟ್ಟಿನ ಮಾರ್ಗಗಳಲ್ಲಿ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶವಿರಬೇಕು. ಏಕಪಕ್ಷೀಯವಾಗಿ ಇಷ್ಟು ದೊಡ್ಡ ಮೊತ್ತದ ಶುಲ್ಕ ವಿಧಿಸುವುದು ಜಾಗತಿಕ ಒಪ್ಪಂದಗಳ ಉಲ್ಲಂಘನೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಇರಾನ್ ಇಂತಹ ಕ್ರಮಕ್ಕೆ ಮುಂದಾದರೆ, ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇ ರಫ್ತು ಮಾಡುವ ತೈಲದ ಬೆಲೆ ದುಬಾರಿಯಾಗಲಿದೆ. ಇದರಿಂದಾಗಿ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಲಿವೆ.








