ಬೆಂಗಳೂರು: ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವ್ಯಾಪ್ತಿಗೆ ಬರುವ ಕರ್ನಾಟಕದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚರಿಸುವವರಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕವನ್ನು (WPI) ಆಧರಿಸಿ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ರಸ್ತೆಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೆಚ್ಚಳ ಅನಿವಾರ್ಯ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.
ಪಾಸ್ ದರ ಏರಿಕೆ
ಕೇವಲ ದಿನನಿತ್ಯದ ಟೋಲ್ ಮಾತ್ರವಲ್ಲದೆ, ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದರದಲ್ಲೂ ಏರಿಕೆಯಾಗಿದೆ. ಪ್ರಸ್ತುತ ₹3,000 ಇರುವ ವಾರ್ಷಿಕ ಪಾಸ್ ದರ ಏಪ್ರಿಲ್ 1ರಿಂದ ₹3,075 ಆಗಲಿದೆ. ಈ ಪಾಸ್ ಮೂಲಕ ವರ್ಷಕ್ಕೆ 200 ಬಾರಿ ಟೋಲ್ ದಾಟಲು ಅವಕಾಶವಿರುತ್ತದೆ.
ಕನಿಷ್ಠ ಬ್ಯಾಲೆನ್ಸ್ ಕಡ್ಡಾಯ
ವಾಹನಗಳ ಫಾಸ್ಟ್‌ಟ್ಯಾಗ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದಲ್ಲಿ ಏಪ್ರಿಲ್ 1ರಿಂದ ದ್ವಿಗುಣ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಬಹುದು.
ಯಾವೆಲ್ಲಾ ರಸ್ತೆಗಳಲ್ಲಿ ದರ ಏರಿಕೆ?
ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳವಾಗಲಿದ್ದು, ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ
ಬೆಂಗಳೂರು – ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ
ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ
ಹೊಸೂರು ರಸ್ತೆ (ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್)
ಬೆಂಗಳೂರು – ಚೆನ್ನೈ ರಾಷ್ಟ್ರೀಯ ಹೆದ್ದಾರಿ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆ (ಸಾದಹಳ್ಳಿ ಟೋಲ್)
ಈ ದರ ಏರಿಕೆಯು ಸಂಚಾರ ದಟ್ಟಣೆ ಹೆಚ್ಚಿರುವ ಈ ಮಾರ್ಗಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಆರ್ಥಿಕ ಬಿಸಿ ಮುಟ್ಟಿಸುವುದು ಖಚಿತವಾಗಿದೆ.








