ಟೆಹ್ರಾನ್: ಜಗತ್ತಿನ ಒಟ್ಟು ತೈಲ ವ್ಯಾಪಾರದ ಶೇ. 20ರಷ್ಟು ಪಾಲು ಹೊಂದಿರುವ ಆಯಕಟ್ಟಿನ ಪ್ರದೇಶ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಸಂಪೂರ್ಣವಾಗಿ ಮುಚ್ಚಿಲ್ಲ, ಆದರೆ ಅದು ‘ಇರಾನ್ನ ಶತ್ರುಗಳಿಗೆ’ ಮಾತ್ರ ಮುಕ್ತವಾಗಿರುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 48 ಗಂಟೆಗಳ ಒಳಗಾಗಿ ಹಾರ್ಮುಜ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಗೊಳಿಸದಿದ್ದರೆ ಇರಾನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದಕ್ಕೆ ಇರಾನ್ ಈಗ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ.
ವಿಶ್ವಸಂಸ್ಥೆಯ ಕಡಲ ಸಂಸ್ಥೆಯಲ್ಲಿ ಇರಾನ್ ಪ್ರತಿನಿಧಿಯಾಗಿರುವ ಅಲಿ ಮೌಸವಿ ಅವರು ಮಾತನಾಡಿ, “ಹಾರ್ಮುಜ್ ಜಲಸಂಧಿಯು ವಾಣಿಜ್ಯ ಸಂಚಾರಕ್ಕೆ ಲಭ್ಯವಿದೆ. ಆದರೆ ಇರಾನ್ನ ಶತ್ರು ರಾಷ್ಟ್ರಗಳಿಗೆ ಸಂಬಂಧಿಸಿದ ಹಡಗುಗಳಿಗೆ ಇಲ್ಲಿ ಅವಕಾಶವಿಲ್ಲ” ಎಂದು ತಿಳಿಸಿದ್ದಾರೆ.
ಟ್ರಂಪ್ ಅವರ 48 ಗಂಟೆಗಳ ಗಡುವು: ಒಂದು ವೇಳೆ ಇರಾನ್ ಹಡಗುಗಳ ಸಂಚಾರಕ್ಕೆ ಅಡ್ಡಿಪಡಿಸಿದರೆ, ಅಲ್ಲಿನ ಅತಿದೊಡ್ಡ ವಿದ್ಯುತ್ ಸ್ಥಾವರಗಳನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರುತ್ ಸೋಶಿಯಲ್’ನಲ್ಲಿ ಬೆದರಿಕೆ ಹಾಕಿದ್ದರು.
ಒಂದು ವೇಳೆ ಅಮೆರಿಕ ನಮ್ಮ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ, ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಮತ್ತು ಅಮೆರಿಕದ ಮಿತ್ರ ರಾಷ್ಟ್ರಗಳ ಇಂಧನ ಕೇಂದ್ರಗಳನ್ನೂ ಗುರಿ ಮಾಡಲಾಗುವುದು ಎಂದು ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಎಚ್ಚರಿಸಿದ್ದಾರೆ.








