ಬೆಂಗಳೂರು: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಫೋನ್ ಚಟ ಮತ್ತು ಅದರ ದುಷ್ಪರಿಣಾಮಗಳನ್ನು ತಡೆಗಟ್ಟಲು ವಿಶ್ವದಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಯುನೆಸ್ಕೋದ ಜಾಗತಿಕ ಶಿಕ್ಷಣ ಉಸ್ತುವಾರಿ ವರದಿಯ ಪ್ರಕಾರ, ವಿಶ್ವದ 114 ದೇಶಗಳು ಈಗಾಗಲೇ ಶಾಲೆಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿವೆ.
ವಿಶ್ವದ ಸುಮಾರು 58% ದೇಶಗಳು ಶಾಲಾ ಆವರಣದಲ್ಲಿ ಮೊಬೈಲ್ ಬಳಕೆಗೆ ತಡೆ ಒಡ್ಡಿವೆ. 2023ರಲ್ಲಿ ಈ ಪ್ರಮಾಣ ಕೇವಲ 24% ರಷ್ಟಿತ್ತು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಕೊರತೆ, ಕಲಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಹಾಗೂ ಸೈಬರ್ ಬುಲ್ಲಿಂಗ್ನಂತಹ ಪ್ರಕರಣಗಳು ಹೆಚ್ಚುತ್ತಿರುವುದು ಈ ನಿರ್ಧಾರಕ್ಕೆ ಮುಖ್ಯ ಕಾರಣ.
ಪ್ರಮುಖ ದೇಶಗಳು
ಆಸ್ಟ್ರೇಲಿಯಾ, ಫ್ರಾನ್ಸ್, ಪೋರ್ಚುಗಲ್ ಮತ್ತು ಸ್ಪೇನ್ನಂತಹ ದೇಶಗಳು ಈಗಾಗಲೇ ಸಾಮಾಜಿಕ ಮಾಧ್ಯಮ ಬಳಕೆಯ ಮೇಲೆ ಕಠಿಣ ನಿರ್ಬಂಧ ಹೇರಿವೆ.
ಹುಡುಗಿಯರಿಗೇ ಹೆಚ್ಚು ಅಪಾಯ
ವರದಿಯ ಪ್ರಕಾರ, ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯಿಂದ ಹುಡುಗರಿಗಿಂತ ಹುಡುಗಿಯರು ಎರಡು ಪಟ್ಟು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ. ಆಹಾರ ಸೇವನೆಯಲ್ಲಿ ವ್ಯತ್ಯಯ (Eating Disorders) ಮತ್ತು ಅಸ್ವಸ್ಥತೆ ಹೆಚ್ಚುತ್ತಿದೆ.
ಮಾನಸಿಕ ಪರಿಣಾಮ: ಇನ್ಸ್ಟಾಗ್ರಾಮ್ನಂತಹ ವೇದಿಕೆಗಳ ಬಳಕೆಯಿಂದ ಸುಮಾರು 32% ಹದಿಹರೆಯದ ಹುಡುಗಿಯರು ತಮ್ಮ ದೇಹದ ಆಕೃತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ವರದಿ ಆತಂಕ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲೂ ಜಾಲತಾಣ ನಿಷೇಧದ ಮುನ್ಸೂಚನೆ
ಜಾಗತಿಕ ಮಟ್ಟದ ಈ ಬೆಳವಣಿಗೆಯ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಮಹತ್ವದ ಹೆಜ್ಜೆ ಇಟ್ಟಿದೆ. ಇತ್ತೀಚಿನ ಬಜೆಟ್ನಲ್ಲಿ ಪ್ರಸ್ತಾಪಿಸಿದಂತೆ, ರಾಜ್ಯದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಇಂತಹ ನಿರ್ಧಾರಕ್ಕೆ ಮುಂದಾದ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದ್ದು, ತೆಲಂಗಾಣ ಸರ್ಕಾರವೂ ಇದೇ ಹಾದಿ ಹಿಡಿಯುವ ಸೂಚನೆ ನೀಡಿದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಈ ಕ್ರಮಗಳು ಅನಿವಾರ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ.








