ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸುತ್ತಿರುವ ಯುದ್ಧವನ್ನು ಕೊನೆಗಾಣಿಸಲು ಅಮೆರಿಕ ಮತ್ತು ಇಸ್ರೇಲ್ ಮೊದಲು ತಮ್ಮ ಮಿಲಿಟರಿ ದಾಳಿಗಳನ್ನು ನಿಲ್ಲಿಸಬೇಕು ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ ಅವರು, ಈ ಸಂಘರ್ಷವನ್ನು ತಡೆಯಲು ಭಾರತದ ಅಧ್ಯಕ್ಷತೆಯಲ್ಲಿರುವ ‘ಬ್ರಿಕ್ಸ್’ ಒಕ್ಕೂಟವು ಪ್ರಬಲ ಪಾತ್ರ ವಹಿಸಬೇಕು ಎಂದು ಮನವಿ ಮಾಡಿದರು.
2026ರಲ್ಲಿ ಭಾರತವು ‘ಬ್ರಿಕ್ಸ್’ (BRICS) ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಶಾಂತಿ ಸ್ಥಾಪಿಸಲು ಮತ್ತು ಇರಾನ್ ಮೇಲಿನ “ಅತಿಕ್ರಮಣ” ತಡೆಯಲು ಬ್ರಿಕ್ಸ್ ದೇಶಗಳು ಸ್ವತಂತ್ರವಾಗಿ ಹಸ್ತಕ್ಷೇಪ ಮಾಡಬೇಕು ಎಂದು ಪೆಜೆಶ್ಕಿಯಾನ್ ಆಶಿಸಿದ್ದಾರೆ.
“ಈ ಯುದ್ಧವನ್ನು ನಾವು ಆರಂಭಿಸಿಲ್ಲ. ಯುದ್ಧ ನಿಲ್ಲಬೇಕಾದರೆ ಮೊದಲು ಅಮೆರಿಕ ಮತ್ತು ಇಸ್ರೇಲ್ ತನ್ನ ಅಕ್ರಮ ದಾಳಿಗಳನ್ನು ನಿಲ್ಲಿಸಬೇಕು. ಇದಕ್ಕೆ ಬ್ರಿಕ್ಸ್ ದೇಶಗಳು ಒತ್ತಡ ಹೇರಬೇಕು,” ಎಂದು ಇರಾನ್ ಅಧ್ಯಕ್ಷರು ಮೋದಿಯವರಿಗೆ ತಿಳಿಸಿದರು. ಹೊರಗಿನ ದೇಶಗಳ ಹಸ್ತಕ್ಷೇಪವಿಲ್ಲದೆ, ಪಶ್ಚಿಮ ಏಷ್ಯಾದ ದೇಶಗಳೇ ಸೇರಿ ಒಂದು ಹೊಸ ಭದ್ರತಾ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯನ್ನು ಇರಾನ್ ಈ ಸಂದರ್ಭದಲ್ಲಿ ಮುಂದಿಟ್ಟಿದೆ.
ಇತ್ತೀಚೆಗೆ ಮಿನಾಬ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 168 ಶಾಲಾ ಮಕ್ಕಳು ಮೃತಪಟ್ಟಿರುವುದನ್ನು ಉಲ್ಲೇಖಿಸಿದ ಅವರು, ಇಸ್ರೇಲ್ ಮತ್ತು ಅಮೆರಿಕದ ಕ್ರಮಗಳು ಅಮಾನವೀಯ ಎಂದು ಖಂಡಿಸಿದರು.








