ವಾಷಿಂಗ್ಟನ್/ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತುತ್ತತುದಿಗೆ ತಲುಪಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಭೀಕರ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ 48 ಗಂಟೆಗಳ ಒಳಗೆ ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಹಡಗು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಇರಾನ್ನ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಅವರು ಗುಡುಗಿದ್ದಾರೆ.
“ಇರಾನ್ ಯಾವುದೇ ಬೆದರಿಕೆ ಇಲ್ಲದೆ ಹಾರ್ಮುಜ್ ಜಲಸಂಧಿಯನ್ನು ಪೂರ್ಣ ಪ್ರಮಾಣದಲ್ಲಿ ತೆರೆಯಬೇಕು. ಇಲ್ಲದಿದ್ದರೆ ಇರಾನ್ನ ಅತಿ ದೊಡ್ಡ ವಿದ್ಯುತ್ ಸ್ಥಾವರದಿಂದ ಆರಂಭಿಸಿ ಅಲ್ಲಿನ ಇಡೀ ವಿದ್ಯುತ್ ಜಾಲವನ್ನೇ ಧ್ವಂಸಗೊಳಿಸುತ್ತೇವೆ,” ಎಂದು ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.ಜಾಗತಿಕ ತೈಲ ಪೂರೈಕೆಯ ಶೇ. 20ರಷ್ಟು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗವನ್ನು ಬಂದ್ ಮಾಡಿರುವುದರಿಂದ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ.
ಅಮೆರಿಕದ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್ ಸೇನೆ, “ಒಂದು ವೇಳೆ ನಮ್ಮ ಇಂಧನ ಅಥವಾ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ನಡೆದರೆ, ಈ ಪ್ರದೇಶದಲ್ಲಿರುವ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಎಲ್ಲಾ ತೈಲ ಹಾಗೂ ಅನಿಲ ಮೂಲಸೌಕರ್ಯಗಳನ್ನು ಸುಟ್ಟು ಹಾಕಲಾಗುವುದು,” ಎಂದು ಎಚ್ಚರಿಸಿದೆ.ಟ್ರಂಪ್ ಅವರ ಈ ಅಲ್ಟಿಮೇಟಂ ಬೆನ್ನಲ್ಲೇ, ಇರಾನ್ನ ಕ್ರಾಂತಿಕಾರಿ ಪಡೆಗಳು ದಕ್ಷಿಣ ಇಸ್ರೇಲ್ನ ದಿಮೋನಾ ಮತ್ತು ಅರಾದ್ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ಇದರಿಂದ ಹಲವರು ಗಾಯಗೊಂಡಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.








