ವಾಷಿಂಗ್ಟನ್/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿರುವುದನ್ನು ನಿಯಂತ್ರಿಸಲು ಟ್ರಂಪ್ ಆಡಳಿತವು ಮಹತ್ವದ ನಿರ್ಧಾರ ಕೈಗೊಂಡಿದೆ. ಸಮುದ್ರದಲ್ಲಿ ಹಡಗುಗಳಲ್ಲಿರುವ ಇರಾನ್ ಮೂಲದ ತೈಲವನ್ನು ಮಾರಾಟ ಮಾಡಲು ಅಮೆರಿಕವು 30 ದಿನಗಳ ಕಾಲ ನಿರ್ಬಂಧಗಳಿಂದ ವಿನಾಯಿತಿ (Sanctions Waiver) ನೀಡಿದೆ.
ಈ ನಿರ್ಧಾರದಿಂದಾಗಿ ಸುಮಾರು 14 ಕೋಟಿ ಬ್ಯಾರೆಲ್ ಇರಾನ್ ತೈಲವು ಜಾಗತಿಕ ಮಾರುಕಟ್ಟೆಗೆ ಲಭ್ಯವಾಗಲಿದೆ. ಇದರಿಂದಾಗಿ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದ ತೈಲ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.ಅಮೆರಿಕದ ಹಣಕಾಸು ಇಲಾಖೆಯ ಪ್ರಕಾರ, ಈ ವಿನಾಯಿತಿಯು ಮಾರ್ಚ್ 20 ರಿಂದ ಏಪ್ರಿಲ್ 19, 2026ರವರೆಗೆ ಜಾರಿಯಲ್ಲಿರುತ್ತದೆ. ಇದು ಕೇವಲ ಈಗಾಗಲೇ ಸಮುದ್ರದಲ್ಲಿ ಸಾಗಣೆಯಾಗುತ್ತಿರುವ (In transit) ತೈಲಕ್ಕೆ ಮಾತ್ರ ಅನ್ವಯಿಸುತ್ತದೆ.
ಈ ಸಡಿಲಿಕೆಯು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ದೊಡ್ಡ ಸಮಾಧಾನ ತರಲಿದೆ. ರಷ್ಯಾ ತೈಲದ ಬಳಿಕ ಈಗ ಭಾರತದ ಸಂಸ್ಕರಣಾ ಘಟಕಗಳು ಇರಾನ್ ತೈಲವನ್ನು ಖರೀದಿಸಲು ಸಜ್ಜಾಗುತ್ತಿವೆ.”ನಾವು ಇರಾನ್‌ನ ತೈಲವನ್ನೇ ಬಳಸಿ ತೈಲ ಬೆಲೆಯನ್ನು ಇಳಿಸುತ್ತಿದ್ದೇವೆ, ಇದರಿಂದ ತೆಹ್ರಾನ್ ಬೊಕ್ಕಸಕ್ಕೆ ಹೆಚ್ಚಿನ ಲಾಭವಾಗದಂತೆ ಎಚ್ಚರಿಕೆ ವಹಿಸಲಾಗುವುದು,” ಎಂದು ಅಮೆರಿಕದ ಟ್ರೆಜರಿ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ತಿಳಿಸಿದ್ದಾರೆ.








