ತೆಲ್ ಅವಿವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಶನಿವಾರ ಬೆಳಿಗ್ಗೆ ಇರಾನ್ ಉಡಾಯಿಸಿದ ಭೀಕರ ‘ಕ್ಲಸ್ಟರ್’ ಕ್ಷಿಪಣಿಯೊಂದು ಮಧ್ಯ ಇಸ್ರೇಲ್‌ನ ರಿಶೋನ್ ಲೆಜಿಯಾನ್ (Rishon Lezion) ನಗರದ ಕಿಂಡರ್‌ಗಾರ್ಟನ್ (ಶಿಶುವಿಹಾರ) ಮೇಲೆ ಅಪ್ಪಳಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ತಿಳಿಸಿದೆ.
ಈ ದಾಳಿಯು ಶನಿವಾರ ಬೆಳಿಗ್ಗೆ ನಡೆದಿದೆ. ಅದೃಷ್ಟವಶಾತ್ ಶನಿವಾರ ರಜಾದಿನವಾಗಿದ್ದರಿಂದ ಶಾಲೆಯಲ್ಲಿ ಮಕ್ಕಳಿರಲಿಲ್ಲ, ಹೀಗಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.ಈ ಕ್ಷಿಪಣಿಯು ಗಾಳಿಯಲ್ಲೇ ಸಿಡಿದು ನೂರಾರು ಸಣ್ಣ ಬಾಂಬ್‌ಗಳನ್ನು (Bomblets) ಹರಡುವ ಸಾಮರ್ಥ್ಯ ಹೊಂದಿದೆ. ಶಾಲೆಯ ಕಟ್ಟಡದ ಮೇಲೆ ಈ ಬಾಂಬ್‌ಗಳು ಬಿದ್ದಿದ್ದು, ಕಿಟಕಿಗಳು ಪುಡಿಯಾಗಿವೆ ಮತ್ತು ಗೋಡೆಗಳಿಗೆ ತೀವ್ರ ಹಾನಿಯಾಗಿದೆ.
ದಾಳಿಯ ವೇಳೆ ಹತ್ತಿರದಲ್ಲಿದ್ದ 70 ವರ್ಷದ ವೃದ್ಧರೊಬ್ಬರು ಮತ್ತು 40 ವರ್ಷದ ವ್ಯಕ್ತಿಯೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.”ನಮ್ಮ ಶತ್ರುಗಳು ನಾಗರಿಕರನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ ಎಂಬುದಕ್ಕೆ ಇದೊಂದು ಸಾಕ್ಷಿ. ಒಂದು ವೇಳೆ ಮಕ್ಕಳು ಅಲ್ಲಿ ಇದ್ದಿದ್ದರೆ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಿ,” ಎಂದು ಐಡಿಎಫ್ ಅಧಿಕಾರಿ ಬ್ರಿಗೇಡಿಯರ್ ಜನರಲ್ ಎಲಾದ್ ಎದ್ರಿ ಆತಂಕ ವ್ಯಕ್ತಪಡಿಸಿದ್ದಾರೆ.
“ಇದು ಮಕ್ಕಳು ಕಲಿಯಬೇಕಾದ ಜಾಗ. ನಮ್ಮ ಮಕ್ಕಳಿಗೆ ಸುರಕ್ಷತೆಯ ಭರವಸೆ ಸಿಗುವವರೆಗೆ ಶಿಕ್ಷಣ ವ್ಯವಸ್ಥೆಯನ್ನು ಪುನರಾರಂಭಿಸುವುದಿಲ್ಲ,” ಎಂದು ರಿಶೋನ್ ಲೆಜಿಯಾನ್ ನಗರದ ಮೇಯರ್ ರಾಜ್ ಕಿನ್ಸ್ಟ್‌ಲಿಚ್ ಘೋಷಿಸಿದ್ದಾರೆ.








