ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಜನಗಣತಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ವಿಚಾರದಲ್ಲಿ ಸರ್ಕಾರ ಮಹತ್ವದ ಸ್ಪಷ್ಟನೆಯನ್ನು ನೀಡಿದೆ. 50 ವರ್ಷ ದಾಟಿದ ಮಹಿಳಾ ಶಿಕ್ಷಕರಿಗೆ ಈ ಕಾರ್ಯಗಳಿಂದ ವಿನಾಯಿತಿ ನೀಡಲಾಗಿದೆ ಎಂಬ ಸುದ್ದಿಯನ್ನು ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ. ಅಲ್ಲದೇ ಎಲ್ಲಾ ಶಿಕ್ಷಕರನ್ನು 2027ರ ಜನಗಣತಿಗೆ ಅಗತ್ಯಕ್ಕೆ ಅನುಗುಣವಾಗಿ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಸರ್ಕಾರ ಆದೇಶದಲ್ಲಿ ಸೂಚಿಸಿದೆ.
ಇತ್ತೀಚೆಗೆ ಕೆಲವು ದಿನಪತ್ರಿಕೆಗಳಲ್ಲಿ “50 ವರ್ಷ ದಾಟಿದ ಮಹಿಳಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ” ನೀಡಲಾಗಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಈ ವರದಿಗಳು ಸಾರ್ವಜನಿಕರಲ್ಲಿ ಮತ್ತು ಶಿಕ್ಷಣ ಇಲಾಖೆಯಲ್ಲಿ ಗೊಂದಲ ಮೂಡಿಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಇಲಾಖೆಯು ಈಗ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.
ಸರ್ಕಾರದ ಸ್ಪಷ್ಟನೆಗಳು:
-
ವಿನಾಯಿತಿ ಇಲ್ಲ: ಪತ್ರಿಕೆಗಳಲ್ಲಿ ಪ್ರಕಟವಾದಂತೆ 50 ವರ್ಷ ದಾಟಿದ ಮಹಿಳಾ ಶಿಕ್ಷಕರಿಗೆ ವಿನಾಯಿತಿ ನೀಡುವ ಯಾವುದೇ ನಿರ್ದೇಶನಗಳನ್ನು ಸರ್ಕಾರ ನೀಡಿಲ್ಲ.
-
ಎಲ್ಲಾ ಶಿಕ್ಷಕರ ನಿಯೋಜನೆ: ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಮತ್ತು 2027ರ ಜನಗಣತಿ ಕಾರ್ಯಕ್ಕೆ ಅಗತ್ಯಕ್ಕೆ ಅನುಗುಣವಾಗಿ ಎಲ್ಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುವುದು.
-
ಮಹಿಳಾ ಶಿಕ್ಷಕರ ಒಳಗೊಳ್ಳುವಿಕೆ: 50 ವರ್ಷ ದಾಟಿದ ಮಹಿಳಾ ಶಿಕ್ಷಕರೂ ಸೇರಿದಂತೆ ಎಲ್ಲಾ ಶಿಕ್ಷಕರನ್ನು ಗಣತಿದಾರರ ಕಾರ್ಯಕ್ಕೆ ನಿಯೋಜಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ.
ಜಿಲ್ಲಾಡಳಿತಕ್ಕೆ ಸೂಚನೆ: ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಜನಗಣತಿ ಮತ್ತು ಚುನಾವಣಾ ಸಂಬಂಧಿತ ಕಾರ್ಯಗಳನ್ನು ಸುಗಮವಾಗಿ ನಡೆಸಲು ನಿರ್ದೇಶಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









