ನವದೆಹಲಿ:ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದು ಏರ್ ಇಂಡಿಯಾದಲ್ಲಿ ನಡೆದಿದೆ. ದೆಹಲಿಯಿಂದ ಕೆನಡಾಕ್ಕೆ ಹೊರಟಿದ್ದ ವಿಮಾನವೊಂದು ಸುಮಾರು 8 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಟ ನಡೆಸಿದ ನಂತರ ದಿಢೀರನೆ ದೆಹಲಿಗೇ ವಾಪಸ್ ಬಂದಿದೆ. ಇದಕ್ಕೆ ಕಾರಣ ತಾಂತ್ರಿಕ ದೋಷವಲ್ಲ, ಬದಲಾಗಿ ಆ ಮಾರ್ಗಕ್ಕೆ ಬಳಸಬೇಕಾದ ಸರಿಯಾದ ವಿಮಾನವನ್ನೇ ಅಧಿಕಾರಿಗಳು ಬದಲಾಯಿಸಿದ್ದು!
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೆನಡಾಕ್ಕೆ ಹೊರಡಲು ನಿಗದಿಯಾಗಿದ್ದ ವಿಮಾನದ ಬದಲಿಗೆ, ಮತ್ತೊಂದು ವಿಮಾನವನ್ನು (Wrong Aircraft) ಸಿಬ್ಬಂದಿ ಸಿದ್ಧಪಡಿಸಿದ್ದರು.ವಿಮಾನವು ಟೇಕ್-ಆಫ್ ಆಗಿ ಸುಮಾರು 4 ಗಂಟೆಗಳ ಕಾಲ ಸಾಗುತ್ತಿತ್ತು. ಅಂದರೆ ಹೋಗಿ ಬರಲು ಒಟ್ಟು 8 ಗಂಟೆಗಳ ಕಾಲ ಪ್ರಯಾಣಿಕರು ಆಕಾಶದಲ್ಲೇ ಕಳೆದಿದ್ದರು. ವಿಮಾನವು ಅರ್ಧ ದಾರಿ ತಲುಪಿದಾಗ, ಈ ವಿಮಾನವು ಕೆನಡಾದಂತಹ ದೀರ್ಘ ಪ್ರಯಾಣಕ್ಕೆ ಸೂಕ್ತವಾದ ಸೌಲಭ್ಯ ಅಥವಾ ತಾಂತ್ರಿಕ ಅನುಮತಿ ಹೊಂದಿಲ್ಲ ಎಂಬುದು ಆಪರೇಟರ್‌ಗಳ ಗಮನಕ್ಕೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ವಿಮಾನವನ್ನು ಕೂಡಲೇ ವಾಪಸ್ ದೆಹಲಿಗೆ ತಿರುಗಿಸಲು ಪೈಲಟ್‌ಗಳಿಗೆ ಸೂಚನೆ ನೀಡಲಾಯಿತು. ಕೆನಡಾದಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಮತ್ತೆ ದೆಹಲಿ ವಿಮಾನ ನಿಲ್ದಾಣಕ್ಕೇ ಬಂದು ಇಳಿಯುವಂತಾಯಿತು.
ಯಾವುದೇ ಮುನ್ಸೂಚನೆಯಿಲ್ಲದೆ ವಿಮಾನವನ್ನು ವಾಪಸ್ ತಂದಿದ್ದರಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 8 ಗಂಟೆಗಳ ಕಾಲ ಸುಮ್ಮನೆ ಆಕಾಶದಲ್ಲಿ ಸುತ್ತಾಡಿಸಿ, ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಿದ್ದಕ್ಕೆ ಏರ್ ಇಂಡಿಯಾ ವಿರುದ್ಧ ಕಿಡಿಕಾರಿದ್ದಾರೆ.
ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವ ಏರ್ ಇಂಡಿಯಾ, “ತಾಂತ್ರಿಕ ಕಾರಣಗಳಿಂದಾಗಿ ವಿಮಾನವನ್ನು ವಾಪಸ್ ತರಬೇಕಾಯಿತು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ಎಲ್ಲರಿಗೂ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ,” ಎಂದು ತಿಳಿಸಿದೆ.








