ಮುಂಬೈ :ಭಾರತೀಯ ಸ್ಟೇಟ್ ಬ್ಯಾಂಕ್ (SBI) ಗೆ ಆದಾಯ ತೆರಿಗೆ ಇಲಾಖೆಯು ಬರೋಬ್ಬರಿ 6,337.5 ಕೋಟಿ ರೂಪಾಯಿ ಪಾವತಿಸುವಂತೆ ತೆರಿಗೆ ಬೇಡಿಕೆ ನೋಟಿಸ್ (Tax Demand Notice) ಜಾರಿ ಮಾಡಿದೆ. ಆದಾಗ್ಯೂ, ಈ ನೋಟಿಸ್ನಿಂದ ಬ್ಯಾಂಕಿನ ದೈನಂದಿನ ವ್ಯವಹಾರ ಅಥವಾ ಹಣಕಾಸಿನ ಸ್ಥಿರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಸ್ಬಿಐ ಸ್ಪಷ್ಟಪಡಿಸಿದೆ.
ತೆರಿಗೆ ಇಲಾಖೆಯು ಬ್ಯಾಂಕಿನ ಹಿಂದಿನ ಕೆಲವು ಹಣಕಾಸು ವರ್ಷಗಳ ತೆರಿಗೆ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳನ್ನು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಬಾಕಿ ಇರುವ ತೆರಿಗೆ ಮತ್ತು ಅದಕ್ಕೆ ಸಂಬಂಧಿಸಿದ ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಈ ಕುರಿತು ಷೇರು ಮಾರುಕಟ್ಟೆಗೆ ಮಾಹಿತಿ ನೀಡಿರುವ ಎಸ್ಬಿಐ, “ನಮಗೆ ಸುಮಾರು 6,337.5 ಕೋಟಿ ರೂ.ಗಳ ತೆರಿಗೆ ಬೇಡಿಕೆ ನೋಟಿಸ್ ಬಂದಿದೆ. ಆದರೆ, ಬ್ಯಾಂಕ್ ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಕಾನೂನು ಪ್ರಕ್ರಿಯೆಯಿಂದ ಬ್ಯಾಂಕಿನ ಗ್ರಾಹಕ ಸೇವೆ ಅಥವಾ ಕಾರ್ಯಾಚರಣೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ,” ಎಂದು ತಿಳಿಸಿದೆ.ಬ್ಯಾಂಕ್ ಈ ತೆರಿಗೆ ಬೇಡಿಕೆಯನ್ನು ಒಪ್ಪುತ್ತಿಲ್ಲ ಮತ್ತು ಇದನ್ನು ರದ್ದುಗೊಳಿಸಲು ಸಂಬಂಧಪಟ್ಟ ತೆರಿಗೆ ಪ್ರಾಧಿಕಾರದ ಮುಂದೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.ಬ್ಯಾಂಕಿನ ಹಣಕಾಸು ಸ್ಥಿತಿ ಸದೃಢವಾಗಿದ್ದು, ಠೇವಣಿದಾರರು ಅಥವಾ ಸಾಲಗಾರರು ಆತಂಕಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.








