ಲಂಡನ್/ಪ್ಯಾರಿಸ್:ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷವು ಜಾಗತಿಕ ತೈಲ ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸಿದೆ. ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ನೀಡಿರುವ ಎಚ್ಚರಿಕೆಯ ಪ್ರಕಾರ, ವಿಶ್ವವು ತನ್ನ ಇತಿಹಾಸದಲ್ಲೇ ಅತ್ಯಂತ ಭೀಕರವಾದ ತೈಲ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿದೆ. 1970ರ ದಶಕದ ತೈಲ ಬಿಕ್ಕಟ್ಟಿಗಿಂತಲೂ ಇದು ಭೀಕರವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಒಟ್ಟು ತೈಲ ಬಳಕೆಯ ಶೇ. 20ರಷ್ಟು ಭಾಗ ಹಾದುಹೋಗುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೂಲಕ ಸಾಗಾಟ ಬಹುತೇಕ ಸ್ಥಗಿತಗೊಂಡಿದೆ. ಇದು ಪೂರೈಕೆ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.ಸಂಘರ್ಷದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳು ಪ್ರತಿದಿನ ಸುಮಾರು 10 ಮಿಲಿಯನ್ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ. ಇದು ಜಾಗತಿಕ ಬೇಡಿಕೆಯ ಶೇ. 10ರಷ್ಟಿದೆ.
ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ $100 ದಾಟಿದ್ದು, ಇದರಿಂದಾಗಿ ಪೆಟ್ರೋಲ್, ಡೀಸೆಲ್ ಮಾತ್ರವಲ್ಲದೆ ಅಡುಗೆ ಅನಿಲ (LPG) ಮತ್ತು ವಿಮಾನ ಇಂಧನ ಬೆಲೆಗಳೂ ಗಗನಕ್ಕೇರಿವೆ.ಈ ಬಿಕ್ಕಟ್ಟನ್ನು ಎದುರಿಸಲು ಐಇಎ (IEA) ಸದಸ್ಯ ರಾಷ್ಟ್ರಗಳು ತಮ್ಮ ಮೀಸಲು ಸಂಗ್ರಹದಿಂದ ದಾಖಲೆಯ 400 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತಿದೊಡ್ಡ ತುರ್ತು ಕ್ರಮವಾಗಿದೆ.








