ಗಾಂಧೀನಗರ: ಎಟಿಎಂನಿಂದ ಹಣ ವಿತ್‌ಡ್ರಾ ಮಾಡಲು ಹೋದ ಗ್ರಾಹಕನೊಬ್ಬನಿಗೆ ತಾಂತ್ರಿಕ ದೋಷದಿಂದ ಹಣ ಕೈ ಸೇರದಿದ್ದರೂ ಖಾತೆಯಿಂದ ಕಡಿತಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಂಬತ್ತು ವರ್ಷಗಳ ಸುದೀರ್ಘ ಹೋರಾಟದ ನಂತರ ಗ್ರಾಹಕನಿಗೆ ಐತಿಹಾಸಿಕ ಜಯ ಸಿಕ್ಕಿದೆ. ಬ್ಯಾಂಕ್ ಆಫ್ ಬರೋಡಾ ಈಗ ತನ್ನ ಗ್ರಾಹಕನಿಗೆ ಮೂಲ ಮೊತ್ತದ 30 ಪಟ್ಟು ಅಂದರೆ ಸುಮಾರು 3.3 ಲಕ್ಷ ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಏನಿದು ಪ್ರಕರಣ?
ಈ ಘಟನೆ 2017ರ ಫೆಬ್ರವರಿ 18ರಂದು ಗುಜರಾತ್‌ನ ಸೂರತ್‌ನಲ್ಲಿ ನಡೆದಿತ್ತು. ಉಧ್ನಾ ಪ್ರದೇಶದ ಗ್ರಾಹಕರೊಬ್ಬರು ಎಸ್‌ಬಿಐ (SBI) ಎಟಿಎಂನಿಂದ 10,000 ರೂ. ವಿತ್‌ಡ್ರಾ ಮಾಡಲು ಪ್ರಯತ್ನಿಸಿದ್ದರು. ಆದರೆ ಯಂತ್ರದಿಂದ ಹಣವೂ ಬರಲಿಲ್ಲ, ರಶೀದಿಯೂ ಮುದ್ರಿತವಾಗಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ಅವರ ಖಾತೆಯಿಂದ 10,000 ರೂ. ಡೆಬಿಟ್ ಆಗಿದೆ ಎಂಬ ಸಂದೇಶ ಬಂದಿತ್ತು.
ಗ್ರಾಹಕನ ಸುದೀರ್ಘ ಹೋರಾಟ:
-
ದೂರು ಸಲ್ಲಿಕೆ: ಹಣ ಕಳೆದುಕೊಂಡ ಗ್ರಾಹಕ ಫೆಬ್ರವರಿ 21, 2017 ರಂದು ಬ್ಯಾಂಕ್ ಆಫ್ ಬರೋಡಾದ ದುಂಭಾಲ್ ಶಾಖೆಯಲ್ಲಿ ಲಿಖಿತ ದೂರು ನೀಡಿದ್ದರು.
-
ಅಧಿಕಾರಿಗಳ ಸಂಪರ್ಕ: 2017ರ ಮಾರ್ಚ್‌ನಿಂದ ಮೇ ವರೆಗೆ ಹಲವಾರು ಇಮೇಲ್‌ಗಳನ್ನು ಕಳುಹಿಸಿದರೂ, ಆರ್‌ಬಿಐ (RBI) ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
-
RTI ಅರ್ಜಿ: ಸಿಸಿಟಿವಿ ದೃಶ್ಯಾವಳಿ ಪಡೆಯಲು ಎಸ್‌ಬಿಐಗೆ ಆರ್‌ಟಿಐ ಅರ್ಜಿಯನ್ನೂ ಸಲ್ಲಿಸಿದ್ದರು, ಆದರೆ ಎಲ್ಲಿಯೂ ತೃಪ್ತಿದಾಯಕ ಪ್ರತಿಕ್ರಿಯೆ ಸಿಗದಿದ್ದಾಗ 2017ರ ಡಿಸೆಂಬರ್‌ನಲ್ಲಿ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದರು.
ಬ್ಯಾಂಕ್ ವಾದ ಮತ್ತು ಆಯೋಗದ ತೀರ್ಪು:
ವಿಚಾರಣೆಯ ವೇಳೆ ಬ್ಯಾಂಕ್ ಆಫ್ ಬರೋಡಾ, “ಎಟಿಎಂ ಎಸ್‌ಬಿಐಗೆ ಸೇರಿದ್ದು, ವಹಿವಾಟು ಯಶಸ್ವಿಯಾಗಿದೆ ಎಂದು ದಾಖಲೆ ತೋರಿಸುತ್ತಿದೆ, ಆದ್ದರಿಂದ ನಾವು ಜವಾಬ್ದಾರರಲ್ಲ” ಎಂದು ವಾದಿಸಿತು. ಆದರೆ ಈ ವಾದವನ್ನು ತಳ್ಳಿಹಾಕಿದ ಗ್ರಾಹಕ ಆಯೋಗವು, ವಹಿವಾಟು ನಡೆದಿದೆ ಎಂಬುದಕ್ಕೆ ಬ್ಯಾಂಕ್ ದೃಢವಾದ ಪುರಾವೆ ಒದಗಿಸಬೇಕು ಎಂದು ಹೇಳಿತು. ಆರ್‌ಬಿಐ ನಿಯಮದಂತೆ 5 ದಿನಗಳಲ್ಲಿ ಹಣ ಮರುಪಾವತಿಸದಿದ್ದಕ್ಕೆ ಬ್ಯಾಂಕ್ ವಿಫಲವಾಗಿದೆ ಎಂದು ಆಯೋಗ ಆಕ್ಷೇಪಿಸಿತು.
ಕೋರ್ಟ್ ಆದೇಶದ ವಿವರ:
ವಾದ-ಪ್ರತಿವಾದಗಳನ್ನು ಆಲಿಸಿದ ಕೋರ್ಟ್ ಈ ಕೆಳಗಿನಂತೆ ಆದೇಶಿಸಿದೆ:
-
ಮೂಲ ಮೊತ್ತ: 10,000 ರೂ.ಗಳನ್ನು ವಾರ್ಷಿಕ 9% ಬಡ್ಡಿಯೊಂದಿಗೆ ಮರುಪಾವತಿಸಬೇಕು.
-
ವಿಳಂಬಕ್ಕೆ ದಂಡ: ಹಣ ಮರುಪಾವತಿ ವಿಳಂಬ ಮಾಡಿದ್ದಕ್ಕಾಗಿ ದಿನಕ್ಕೆ 100 ರೂ. ನಂತೆ ಪರಿಹಾರ ನೀಡಬೇಕು.
-
ಒಟ್ಟು ದಂಡ: ಪ್ರಕರಣ ನಡೆದು 2026ರ ಫೆಬ್ರವರಿ 26ಕ್ಕೆ 3,288 ದಿನಗಳಾಗಿದ್ದು, ಈ ಪರಿಹಾರದ ಮೊತ್ತವೇ 3,28,800 ರೂ. ತಲುಪಿದೆ.
-
ಇತರೆ: ಮಾನಸಿಕ ಕಿರುಕುಳಕ್ಕಾಗಿ 3,000 ರೂ. ಹಾಗೂ ಕಾನೂನು ವೆಚ್ಚಗಳಿಗಾಗಿ 2,000 ರೂ. ಪಾವತಿಸಲು ಸೂಚಿಸಲಾಗಿದೆ.
ಒಟ್ಟು 10,000 ರೂ.ಗಳಿಗಾಗಿ ಆರಂಭವಾದ ಈ ಹೋರಾಟ ಇಂದು ಬ್ಯಾಂಕ್‌ಗೆ ಲಕ್ಷಾಂತರ ರೂಪಾಯಿಗಳ ಭಾರೀ ದಂಡವಾಗಿ ಪರಿಣಮಿಸಿದೆ.
KEAಯಿಂದ ಎಂಬಿಎ, ಎಂಸಿಎ, M.E, M.Tech ಕೋರ್ಸ್‌ಗಳ ಪ್ರವೇಶಕ್ಕೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ
BREAKING : ಉಪಚುನಾವಣೆ ಕಾವು : ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ತಾಯಿಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದ ಸಮರ್ಥ








