ಚಿತ್ರದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ತನ್ನ ಪತ್ನಿ, ಮಗಳು ಸೇರಿದಂತೆ ಒಂದೇ ಕುಟುಂಬದ ಐವರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಪನಟ್ಟಿಯಲ್ಲಿ ಗುರುವಾರ ನಡೆದಿದೆ.
ಘಟನೆಯ ವಿವರ: ಆರೋಪಿ ಮೊಹಮ್ಮದ್ ಸುಹೇಲ್ (44) ಎಂಬಾತ ತನ್ನಿಂದ ದೂರವಿದ್ದ ಪತ್ನಿ ತಶೀನ್ ಬಾನು ಮೇಲೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾನೆ. ಸುಹೇಲ್ ಮತ್ತು ತಶೀನ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಸುಹೇಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಪತ್ನಿ ಕಳೆದ ಎಂಟು ತಿಂಗಳಿನಿಂದ ಆತನಿಂದ ದೂರವಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗೆ ಹಬ್ಬದ ಪ್ರಯುಕ್ತ ತಶೀನ್ ಅವರು ಚಿತ್ರದುರ್ಗದ ಮಾಳಪನಟ್ಟಿಯಲ್ಲಿರುವ ತಮ್ಮ ಸಹೋದರಿಯ ಮನೆಗೆ ಬಂದಿದ್ದರು.
ಈ ವಿಷಯ ತಿಳಿದ ಸುಹೇಲ್, ಏಕಾಏಕಿ ಮನೆಗೆ ನುಗ್ಗಿ ಪತ್ನಿ ಮತ್ತು ಮಗಳ ಮೇಲೆ ಆಸಿಡ್ ಎರಚಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಬಳಿಯಿದ್ದ ಮಚ್ಚಿನಿಂದಲೂ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದಾರೆ.
ಪೊಲೀಸ್ ಭೇಟಿ ಮತ್ತು ತನಿಖೆ: ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಅವರು, “ಆಟೋ ಚಾಲಕನಾಗಿರುವ ಸುಹೇಲ್ ಈ ಕೃತ್ಯ ಎಸಗಿದ್ದಾನೆ. ಗಾಯಾಳುಗಳನ್ನು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಈ ಸಂಬಂಧ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
ನಮ್ಮ ಮೆಟ್ರೋದಲ್ಲಿ ಸಾರ್ವಕಾಲಿಕ ದಾಖಲೆ: ಒಂದೇ ದಿನ 10.73 ಲಕ್ಷ ಮಂದಿ ಪ್ರಯಾಣ!
GOOD NEWS: ಮೈಸೂರು-ನಂಜನಗೂಡು ಟೌನ್ ನಡುವೆ ವಿಶೇಷ ಕಾಯ್ದಿರಿಸದ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ








