ಬೆಂಗಳೂರು: ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡುವ ಗ್ರಾಹಕರಿಗೆ ಜೊಮ್ಯಾಟೊ ಶಾಕ್ ನೀಡಿದೆ. ತನ್ನ ಲಾಭಾಂಶವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಂಪನಿಯು ಪ್ರತಿ ಆರ್ಡರ್ ಮೇಲೆ ವಿಧಿಸುವ ‘ಪ್ಲಾಟ್ಫಾರ್ಮ್ ಫೀ’ (Platform Fee) ಅನ್ನು ಬರೋಬ್ಬರಿ 14.90 ರೂಪಾಯಿಗೆ ಏರಿಕೆ ಮಾಡಿದೆ. ಈ ಮೂಲಕ ತನ್ನ ಕಡುವೈರಿ ಸ್ವಿಗ್ಗಿಯ ದರಕ್ಕೆ ಸಮನಾಗಿ ನಿಂತಿದೆ.
ಆರಂಭದಲ್ಲಿ ಕೇವಲ 2 ರೂಪಾಯಿಯಿಂದ ಆರಂಭವಾಗಿದ್ದ ಈ ಶುಲ್ಕ, ಕಳೆದ ಕೆಲವು ತಿಂಗಳುಗಳಲ್ಲಿ 5, 7, 10 ರೂಪಾಯಿ ದಾಟಿ ಈಗ 14.90 ರೂಪಾಯಿಗೆ ಬಂದು ನಿಂತಿದೆ. ಸ್ವಿಗ್ಗಿ ಈಗಾಗಲೇ ಕೆಲವು ಆಯ್ದ ನಗರಗಳಲ್ಲಿ 15 ರೂಪಾಯಿಯ ಆಸುಪಾಸಿನಲ್ಲಿ ಶುಲ್ಕ ವಿಧಿಸುತ್ತಿದೆ. ಈಗ ಜೊಮ್ಯಾಟೊ ಕೂಡ ಅದೇ ಹಾದಿ ಹಿಡಿಯುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮುಂದಾಗಿದೆ.
ನೀವು ‘ಜೊಮ್ಯಾಟೊ ಗೋಲ್ಡ್’ (Zomato Gold) ಸದಸ್ಯರಾಗಿದ್ದರೂ ಸಹ, ಈ ಪ್ಲಾಟ್ಫಾರ್ಮ್ ಫೀ ಪಾವತಿಸುವುದು ಕಡ್ಡಾಯವಾಗಿದೆ. ಅಂದರೆ, ಉಚಿತ ಡೆಲಿವರಿ ಸೌಲಭ್ಯವಿದ್ದರೂ ಈ ಹೆಚ್ಚುವರಿ ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಕಂಪನಿಯ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಮತ್ತು ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶವನ್ನು ತೋರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.








