ಪಯೋಂಗ್ಯಾಂಗ್: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್ ಅವರ ಹದಿಹರೆಯದ ಪುತ್ರಿ ಕಿಮ್ ಜೂ ಏ (Kim Ju Ae), ತನ್ನ ತಂದೆಯ ಸಮ್ಮುಖದಲ್ಲೇ ಬೃಹತ್ ಯುದ್ಧ ಟ್ಯಾಂಕ್ ಅನ್ನು ಓಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಕೊರಿಯಾದ ಸೇನಾ ತಾಲೀಮಿನಲ್ಲಿ ಭಾಗವಹಿಸಿದ್ದ ಈಕೆ, ಅತ್ಯಾಧುನಿಕ ಟ್ಯಾಂಕ್ ಅನ್ನು ಚಲಾಯಿಸಿ ಶಕ್ತಿ ಪ್ರದರ್ಶನ ಮಾಡಿದ್ದಾಳೆ.
ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮಗಳು ಬಿಡುಗಡೆ ಮಾಡಿದ ಫೋಟೋಗಳಲ್ಲಿ, ಕಿಮ್ ಜೂ ಏ ಟ್ಯಾಂಕ್‌ನ ಡ್ರೈವರ್ ಸೀಟಿನಲ್ಲಿ ಕುಳಿತು ಅದನ್ನು ನಿಯಂತ್ರಿಸುತ್ತಿರುವುದು ಕಂಡುಬಂದಿದೆ. ಆಕೆಯ ಹಿಂದೆ ತಂದೆ ಕಿಮ್ ಜೊಂಗ್ ಉನ್ ಹೆಮ್ಮೆಯಿಂದ ನಗುತ್ತಾ ಕುಳಿತಿದ್ದರು.
ಈ ತಾಲೀಮಿನಲ್ಲಿ ಕೇವಲ ಟ್ಯಾಂಕ್ ಚಾಲನೆ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ಆಕೆ ಪಿಸ್ತೂಲು ಹಿಡಿದು ಗುರಿ ಇಡುವುದು ಮತ್ತು ಕ್ಷಿಪಣಿ ಉಡಾವಣೆ ವೀಕ್ಷಿಸುವುದನ್ನೂ ಮಾಡಿದ್ದಾಳೆ.
ಕೇವಲ 13 ವರ್ಷ ವಯಸ್ಸಿನವಳೆನ್ನಲಾದ ಕಿಮ್ ಜೂ ಏ, ಇತ್ತೀಚೆಗೆ ಪ್ರಮುಖ ಸೇನಾ ಕಾರ್ಯಕ್ರಮಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈಕೆ ಕಿಮ್ ಜೊಂಗ್ ಉನ್ ನಂತರ ದೇಶದ ಮುಂದಿನ ನಾಯಕಿ ಅಥವಾ ‘ಉತ್ತರಾಧಿಕಾರಿ’ ಆಗುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ವಿಶ್ಲೇಷಿಸಿವೆ.
ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸೇನಾ ತಾಲೀಮಿಗೆ ಪ್ರತಿಯಾಗಿ ಉತ್ತರ ಕೊರಿಯಾ ಈ ಯುದ್ಧಾಭ್ಯಾಸ ನಡೆಸಿದ್ದು, ತನ್ನ ಸೇನಾ ಬಲವನ್ನು ಜಗತ್ತಿಗೆ ತೋರಿಸಲು ಪ್ರಯತ್ನಿಸಿದೆ.
ನಾಯಕಿಯಾಗಿ ಬೆಳವಣಿಗೆ:
ಉತ್ತರ ಕೊರಿಯಾದ ಮಾಧ್ಯಮಗಳು ಈಕೆಯನ್ನು “ಗೌರವಾನ್ವಿತ ಪುತ್ರಿ” ಅಥವಾ “ಅತ್ಯಂತ ಪ್ರೀತಿಯ ಮಗು” ಎಂದು ಸಂಬೋಧಿಸುತ್ತಿವೆ. ಇದು ಆಕೆಗೆ ದೇಶದ ಆಡಳಿತದಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತಿದೆ ಎಂಬುದರ ಸ್ಪಷ್ಟ ಸಂಕೇತ ಎನ್ನಲಾಗಿದೆ.








