ಡೇಜಿಯಾನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಡೇಜಿಯಾನ್ ನಗರದಲ್ಲಿರುವ ಪ್ರಮುಖ ಕಾರು ಬಿಡಿಭಾಗಗಳ ತಯಾರಿಕಾ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ. ಬೆಂಕಿಯ ಜ್ವಾಲೆಗಳು ಆಕಾಶಕ್ಕೆ ಮುಟ್ಟುತ್ತಿದ್ದು, ಇಡೀ ಪ್ರದೇಶ ದಟ್ಟ ಹೊಗೆಯಿಂದ ಆವೃತವಾಗಿದೆ.
ಬೆಳಿಗ್ಗೆ ಕಾರ್ಖಾನೆಯ ಒಂದು ವಿಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಘಟನೆಯ ಸಮಯದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗಾಯಾಳುಗಳ ಸ್ಥಿತಿ: ಗಾಯಗೊಂಡ 50ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿ ಎದುರಾಗಿದೆ. ಬಹುತೇಕರು ಉಸಿರಾಟದ ತೊಂದರೆ ಮತ್ತು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ.
ನೂರಾರು ಅಗ್ನಿಶಾಮಕ ಸಿಬ್ಬಂದಿ ಮತ್ತು ಹತ್ತಾರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಕೆಮಿಕಲ್ ಮತ್ತು ರಬ್ಬರ್ ಬಿಡಿಭಾಗಗಳಿದ್ದ ಕಾರಣ ಬೆಂಕಿ ನಿಯಂತ್ರಣಕ್ಕೆ ತರುವುದು ಕಷ್ಟಕರವಾಗಿದೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದ್ದರೂ, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಕಾರ್ಖಾನೆಯಿಂದ ಹೊರಬರುತ್ತಿರುವ ವಿಷಕಾರಿ ಹೊಗೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಮತ್ತು ಮಾಸ್ಕ್ ಧರಿಸುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.








