ಬೆಂಗಳೂರು: ಸಾಮಾನ್ಯವಾಗಿ ಒಬ್ಬ ಆರೋಗ್ಯವಂತ ವ್ಯಕ್ತಿಯ ಮೂತ್ರದ ಬಣ್ಣವು ತಿಳಿ ಹಳದಿಯಾಗಿರುತ್ತದೆ. ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಈ ಬಣ್ಣದಲ್ಲಿ ಸಣ್ಣಪುಟ್ಟ ಬದಲಾವಣೆಗಳಾಗುವುದು ಸಹಜ. ಆದರೆ, ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಸತತವಾಗಿ ಎರಡು-ಮೂರು ದಿನಗಳ ಕಾಲ ಮೂತ್ರದ ಬಣ್ಣವು ಬದಲಾಗಿದ್ದರೆ ಅದನ್ನು ನಿರ್ಲಕ್ಷಿಸಬಾರದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
ಮೂತ್ರದ ಬಣ್ಣವು ದೇಹದ ಒಳಗಿನ ಆರೋಗ್ಯ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿಯಿದ್ದಂತೆ. ನಿಮ್ಮ ಮೂತ್ರದ ಬಣ್ಣ ಯಾವುದನ್ನು ಸೂಚಿಸುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ:
1. ಕೆಂಪು ಅಥವಾ ಗುಲಾಬಿ ಬಣ್ಣ
ಮೂತ್ರವು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಿದರೆ ತಕ್ಷಣವೇ ಆತಂಕವಾಗುವುದು ಸಹಜ. ನೀವು ಬೀಟ್ರೂಟ್ ಅಥವಾ ಬ್ಲ್ಯಾಕ್ಬೆರಿ ತಿಂದಿದ್ದರೆ ಅಥವಾ ಟಿಬಿ (ಕ್ಷಯ) ಕಾಯಿಲೆಗೆ ಔಷಧಿಯನ್ನು ಸೇವಿಸುತ್ತಿದ್ದರೆ ಈ ಬಣ್ಣ ಬರಬಹುದು. ಆದರೆ, ಇವುಗಳ ಸೇವನೆ ಇಲ್ಲದೆಯೂ ಬಣ್ಣ ಬದಲಾಗಿದ್ದರೆ ಅದು ಪ್ರಾಸ್ಟೇಟ್ ಗ್ರಂಥಿಯ ಸಮಸ್ಯೆ, ಮೂತ್ರಪಿಂಡದ ಕಲ್ಲುಗಳು ಅಥವಾ ಗೆಡ್ಡೆಗಳ (Tumors) ಸಂಕೇತವಾಗಿರಬಹುದು.
2. ಮಸುಕಾದ ಅಥವಾ ಮೋಡದಂತಿರುವ ಬಣ್ಣ (Cloudy Urine)
ನಿಮ್ಮ ಮೂತ್ರವು ಆಕಾಶದಲ್ಲಿ ಮೋಡ ಕವಿದಂತೆ ಮಸುಕಾಗಿದ್ದರೆ, ಅದು ಮೂತ್ರಪಿಂಡದ (Kidney) ಸಮಸ್ಯೆ ಅಥವಾ ಮೂತ್ರನಾಳದ ಸೋಂಕಿನ (UTI) ಲಕ್ಷಣವಾಗಿರಬಹುದು. ಮೂತ್ರಪಿಂಡದಲ್ಲಿ ಕಲ್ಲುಗಳಿದ್ದಾಗಲೂ ಮೂತ್ರವು ಈ ರೀತಿ ಮರ್ಕಿಯಾಗಿ ಕಾಣಿಸಿಕೊಳ್ಳುತ್ತದೆ.
3. ಕಿತ್ತಳೆ ಬಣ್ಣ
ಕೆಲವು ವಿಟಮಿನ್ ಮಾತ್ರೆಗಳು, ಮಲಬದ್ಧತೆ ನಿವಾರಕ ಔಷಧಿಗಳು ಅಥವಾ ನೋವು ನಿವಾರಕಗಳನ್ನು ಸೇವಿಸಿದಾಗ ಮೂತ್ರವು ಕಿತ್ತಳೆ ಬಣ್ಣಕ್ಕೆ ತಿರುಗಬಹುದು. ಆದರೆ ಔಷಧ ಸೇವನೆ ಇಲ್ಲದೆಯೂ ಈ ಬಣ್ಣವಿದ್ದರೆ, ಅದು ಯಕೃತ್ತು (Liver) ಅಥವಾ ಪಿತ್ತರಸ ನಾಳದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ.
4. ನೀಲಿ ಅಥವಾ ಹಸಿರು ಬಣ್ಣ
ಕೆಲವು ಬಣ್ಣಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಅಥವಾ ಖಿನ್ನತೆ, ಆಸಿಡ್ ರಿಫ್ಲಕ್ಸ್ ಮತ್ತು ಸಂಧಿವಾತದ ಔಷಧಿಗಳ ಕಾರಣದಿಂದಾಗಿ ಮೂತ್ರವು ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗಬಹುದು. ಅಲ್ಲದೆ, ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾದಾಗ ಅಥವಾ ಬ್ಯಾಕ್ಟೀರಿಯಾದ ಸೋಂಕು ಉಂಟಾದಾಗಲೂ ಈ ರೀತಿಯ ಬಣ್ಣ ಕಂಡುಬರುತ್ತದೆ.
5. ಕಂದು ಅಥವಾ ಸಕ್ಕರೆ ಪಾಕದ ಬಣ್ಣ
ಮೂತ್ರವು ಸಕ್ಕರೆ ಪಾಕದಂತೆ ಕಂದು ಬಣ್ಣದಲ್ಲಿದ್ದರೆ ಅದು ಮಧುಮೇಹದ (Diabetes) ಆರಂಭಿಕ ಲಕ್ಷಣವಿರಬಹುದು. ಸಾಮಾನ್ಯವಾಗಿ ಮಧುಮೇಹ ರೋಗಿಗಳಲ್ಲಿ ಮೂತ್ರವು ಕಂದು-ಬೂದು ಬಣ್ಣದಲ್ಲಿ ಕಂಡುಬರುತ್ತದೆ.
6. ಗಾಢ ಕಂದು ಅಥವಾ ಕೋಲಾ ಬಣ್ಣ
ಫಾವಾ ಬೀನ್ಸ್ನಂತಹ ಆಹಾರಗಳು ಅಥವಾ ಮಲೇರಿಯಾ ವಿರೋಧಿ ಔಷಧಿಗಳು, ಆ್ಯಂಟಿಬಯೋಟಿಕ್ಗಳ ಸೇವನೆಯಿಂದ ಈ ಬಣ್ಣ ಬರಬಹುದು. ಆದರೆ ಈ ಬಣ್ಣದ ಬದಲಾವಣೆಯು ದೀರ್ಘಕಾಲ ಕಾಡಿದರೆ ಅದು ಲಿವರ್ ಅಥವಾ ಕಿಡ್ನಿ ವೈಫಲ್ಯದ ಸೂಚನೆಯೂ ಆಗಿರಬಹುದು.
ಗಮನಿಸಿ: ಮೂತ್ರದ ಬಣ್ಣದಲ್ಲಿನ ಬದಲಾವಣೆಯು ಕೇವಲ ಒಂದು ಸೂಚನೆಯಾಗಿದೆ. ಹೀಗೆ ಕಂಡುಬಂದ ತಕ್ಷಣ ಭಯಪಡುವ ಅಗತ್ಯವಿಲ್ಲ, ಬದಲಿಗೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.








