ನವದೆಹಲಿ: ದೆಹಲಿ ಮತ್ತು ಬೆಂಗಳೂರು ನಗರಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ವಿಮಾನಯಾನ ಸಂಸ್ಥೆ ‘ಇಂಡಿಗೋ’ ತನ್ನ ಪ್ರಯಾಣಿಕರಿಗೆ ಮಹತ್ವದ ಪ್ರವಾಸಿ ಸಲಹೆಯನ್ನು (Travel Advisory) ನೀಡಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂದು ಸಂಸ್ಥೆ ತಿಳಿಸಿದೆ.
ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಪ್ರಯಾಣಿಕರು ಇಂಡಿಗೋ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ತಮ್ಮ ವಿಮಾನದ ಸದ್ಯದ ಸ್ಥಿತಿಯನ್ನು ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಲು ಕೋರಲಾಗಿದೆ.
ಮಳೆಯ ಕಾರಣದಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ (Traffic) ಹೆಚ್ಚಿರಲಿದ್ದು, ವಿಮಾನ ನಿಲ್ದಾಣ ತಲುಪಲು ಹೆಚ್ಚಿನ ಸಮಯ ಬೇಕಾಗಬಹುದು. ಆದ್ದರಿಂದ ನಿಗದಿತ ಸಮಯಕ್ಕಿಂತ ಮೊದಲೇ ಮನೆಯಿಂದ ಹೊರಡುವಂತೆ ಸೂಚಿಸಲಾಗಿದೆ.
ದೆಹಲಿ ಮತ್ತು ಬೆಂಗಳೂರು ವಾಯುಮಂಡಲದಲ್ಲಿ ಗುಡುಗು ಮತ್ತು ಮಿಂಚಿನ ಆರ್ಭಟ ಇರುವುದರಿಂದ ವಿಮಾನಗಳ ಹಾರಾಟದ ವೇಗ ಮತ್ತು ವೇಳಾಪಟ್ಟಿಯಲ್ಲಿ ಸಣ್ಣ ಮಟ್ಟದ ಬದಲಾವಣೆಗಳಾಗಬಹುದು.
ಹವಾಮಾನ ಇಲಾಖೆ ಎಚ್ಚರಿಕೆ:
ದೆಹಲಿಯಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದ್ದು, ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು, ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.








