ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಯುಗಾದಿ ಹಬ್ಬದ ಸಂಭ್ರಮದ ಬೆನ್ನಲ್ಲೇ ಇಂದು ‘ಹೊಸ ತೊಡಕು’ ಅದ್ದೂರಿಯಾಗಿ ನಡೆಯುತ್ತಿದೆ. ಬೆಳ್ಳಂಬೆಳಿಗ್ಗೆಯೇ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ಮಾಂಸದ ಅಂಗಡಿಗಳ ಮುಂದೆ ಜನವೋ ಜನ. ವಿಶೇಷವಾಗಿ ಹಳೆ ಮೈಸೂರು ಭಾಗದ ಸಂಪ್ರದಾಯದಂತೆ ಬೆಂಗಳೂರಿನಲ್ಲಿ ಗುಡ್ಡೆ ಮಾಂಸಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ.
ಹೌದು ಯುಗಾದಿ ಹೊಸ ತೊಡಕು ಹಿನ್ನೆಲೆ ಗುಡ್ಡೆ ಮಾಂಸ ವ್ಯಾಪಾರ ಇದೀಗ ಜೋರಾಗಿದೆ ಬೆಳ್ಳಂಬೆಳಗ್ಗೆ ಗ್ರಾಮೀಣ ಸೊಗಡು ಗುಡ್ಡೆ ವಂಶಕ್ಕೆ ಜನರು ಮುಗಿ ಬಿದ್ದಿದ್ದಾರೆ ದೇವನಹಳ್ಳಿ ತಾಲೂಕಿನ ಎಲ್ಲಿ ಊರಿನಲ್ಲಿ ಗುಡ್ಡೆ ಮಾಂಸ ಮಾರಾಟ ಜೋರಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರಿನಲ್ಲಿ ವಿವಿಧ ಕಡೆಯಿಂದ ಬಂದು ಜನರು ಗುಡ್ಡೆ ಮಾಂಸ ಖರೀದಿ ಮಾಡುತ್ತಿದ್ದಾರೆ.
ಏನಿದು ಹೊಸ ತೊಡಕು?
ಹೊಸ ವರ್ಷದ (ಯುಗಾದಿ) ಮೊದಲ ದಿನದಂದು ಬೇವು-ಬೆಲ್ಲ ಸವಿದು, ಹೊಸ ಬಟ್ಟೆ ಧರಿಸಿ ಪೂಜೆ ಸಲ್ಲಿಸಿದರೆ, ಅದರ ಮರುದಿನವನ್ನು ‘ವರ್ಷದ ತೊಡಕು’ ಅಥವಾ ಜನಜನಿತವಾಗಿ ‘ಹೊಸ ತೊಡಕು’ ಎಂದು ಆಚರಿಸಲಾಗುತ್ತದೆ. ಈ ದಿನ ಮಾಂಸಾಹಾರ ಸೇವನೆ ಮಾಡುವುದು ದಶಕಗಳಿಂದ ನಡೆದು ಬಂದಿರುವ ವಾಡಿಕೆ. ಅಂದು ಮೃಷ್ಟಾನ್ನ ಭೋಜನ ಸವಿದರೆ ವರ್ಷವಿಡೀ ಯಾವುದೇ ಕಷ್ಟ ಕಾರ್ಪಣ್ಯಗಳಿಲ್ಲದೆ ಸುಖವಾಗಿರಬಹುದು ಎಂಬ ನಂಬಿಕೆ ಜನಮಾನಸದಲ್ಲಿದೆ.
ಇತಿಹಾಸ ಮತ್ತು ಹಿನ್ನೆಲೆ
ಕೃಷಿಕರ ಸಂಪ್ರದಾಯ: ಮೂಲತಃ ಇದು ಕೃಷಿ ಸಂಸ್ಕೃತಿಯ ಭಾಗ. ಯುಗಾದಿ ಹಬ್ಬದ ಸಮಯದಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಅಣಿಯಾಗುತ್ತಾರೆ. ಶ್ರಮದ ಕೆಲಸ ಆರಂಭಿಸುವ ಮುನ್ನ ದೈಹಿಕ ಶಕ್ತಿಗಾಗಿ ಮತ್ತು ಸಂಭ್ರಮಕ್ಕಾಗಿ ಮಾಂಸಾಹಾರದ ಹಬ್ಬ ಮಾಡುತ್ತಿದ್ದರು.
ಬೇಟೆಯ ಪರಂಪರೆ: ಹಿಂದಿನ ಕಾಲದಲ್ಲಿ ರಾಜರು ಮತ್ತು ಪಾಳೆಗಾರರು ಹಬ್ಬದ ಮರುದಿನ ಬೇಟೆಗೆ ಹೋಗುವ ಸಂಪ್ರದಾಯವಿತ್ತು. ಬೇಟೆಯಾಡಿ ತಂದ ಪ್ರಾಣಿಯ ಮಾಂಸವನ್ನು ಗ್ರಾಮಸ್ಥರೆಲ್ಲರೂ ಹಂಚಿಕೊಂಡು ತಿನ್ನುತ್ತಿದ್ದರು. ಇದು ಕಾಲಕ್ರಮೇಣ ‘ಹೊಸ ತೊಡಕು’ ಆಗಿ ಬದಲಾಯಿತು.
ಸಾಮೂಹಿಕ ಹಂಚಿಕೆ (ಗುಡ್ಡೆ ಮಾಂಸ): ಹಳ್ಳಿಗಳಲ್ಲಿ ಒಂದು ಕುರಿ ಅಥವಾ ಮೇಕೆಯನ್ನು ಒಂದೇ ಕುಟುಂಬ ಕೊಳ್ಳುವುದು ಕಷ್ಟವಾಗುತ್ತಿತ್ತು. ಹಾಗಾಗಿ, ಗ್ರಾಮದ ಹತ್ತಾರು ಜನರು ಸೇರಿ ಒಂದು ಪ್ರಾಣಿಯನ್ನು ಕಡಿದು, ಅದರ ಮಾಂಸವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ಇದನ್ನೇ ‘ಗುಡ್ಡೆ ಹಾಕುವುದು’ ಎನ್ನಲಾಗುತ್ತದೆ. ಇಂದು ಬೆಂಗಳೂರಿನಂತಹ ನಗರಗಳಲ್ಲಿಯೂ ಇದೇ ಸಂಪ್ರದಾಯ ‘ಗುಡ್ಡೆ ಮಾಂಸ’ದ ರೂಪದಲ್ಲಿ ಮುಂದುವರಿಯುತ್ತಿದೆ.








