ಬೆಂಗಳೂರು : ಇತ್ತೀಚಿಗೆ ರಾಜ್ಯದ ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವಂತೆ ಆಗ್ರಹಿಸಿ ಧಾರವಾಡದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬಳಿಕ ಸರ್ಕಾರ ಕೂಡ ನೇಮಕಾತಿ ಮಾಡುತ್ತೇವೆ ಎಂದು ಹೇಳಿದೆ. ಅದರ ಬೆನ್ನಲ್ಲೆ, ಇದೀಗ ಕೃಷಿ ಇಲಾಖೆಯಲ್ಲಿ ರಾಜ್ಯ ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಲು ಮುಂದಾಗಿದೆ.
ಈ ಕುರಿತು ಕೃಷಿ ಇಲಾಖೆಯ ಗ್ರೂಪ್ ‘ಬಿ’ ಮತ್ತು ‘ಸಿ’ ವೃಂದದ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ವೃಂದದ 945 ಹುದ್ದೆಗಳಿಗೆ ಮೂರು ತಿಂಗಳೊಳಗೆ ನೇಮಕಾತಿ ನಡೆಸುವುದಾಗಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಪ್ರಶೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕಿರಣ್ ಕುಮಾರ್ ಕೊಡ್ಲಿ ಪ್ರಶ್ನೆಗೆ ಉತ್ತರಿಸಿ, ಕೃಷಿ ಇಲಾಖೆಯಲ್ಲಿ ಕೊನೆಯದಾಗಿ 2018ರಲ್ಲಿ 370 ಹುದ್ದೆಗಳಿಗೆ ನೇಮಕಾತಿ ನಡೆದಿದೆ. ನಂತರ ಇಲಾಖೆಯಲ್ಲಿ ಯಾವುದೇ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೆಪಿಎಸ್ಸಿಯಿಂದ ನೇರ ನೇಮಕಾತಿ ಮುಖಾಂತರ 945 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ಈ ನಡುವೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾರಿ ಹಿನ್ನೆಲೆ ಸರ್ಕಾರದ ನಿರ್ದೇಶನದ ಮೇರೆಗೆ ಅಧಿ ಸೂಚನೆ ರದ್ದುಪಡಿಸಲಾಗಿದೆ.
ಇದೀಗ ಸರ್ಕಾರದ ನಿರ್ದೇಶನದ ಮೇರೆಗೆ ನೇಮಕಾತಿ ಅಧಿಸೂಚನೆ ಹೊರಡಿಸಲು ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಲಾಗಿದೆ ಎಂದರು. ಈ ವೇಳೆ ‘ಪ್ರತಿ ಐದು ವರ್ಷಗಳಿಗೊಮ್ಮೆ ನೇಮಕಾತಿ ನಡೆಸಿದರೆ ಸಿಬ್ಬಂದಿ ಸಮಸ್ಯೆ ಉಂಟಾಗುವುದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ ಎಂದರು.








