ದೋಹಾ/ನ್ಯೂಯಾರ್ಕ್: ಇರಾನ್ ನಡೆಸುತ್ತಿರುವ ಸರಣಿ ಆಕ್ರಮಣಕಾರಿ ಚಟುವಟಿಕೆಗಳು ಮತ್ತು ಇತ್ತೀಚಿನ ಅನಿಲ ಘಟಕಗಳ ಮೇಲಿನ ದಾಳಿಯಿಂದ ಉಂಟಾಗಿರುವ ಪ್ರಾದೇಶಿಕ ಅಸ್ಥಿರತೆಯ ಕುರಿತಂತೆ ಕತಾರ್ ಸರ್ಕಾರವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (UNSC) ತನ್ನ 9ನೇ ಅಧಿಕೃತ ಪತ್ರವನ್ನು ರವಾನಿಸಿದೆ. ಇರಾನ್‌ನ ಈ ನಡೆಗಳು ಅಂತರಾಷ್ಟ್ರೀಯ ಶಾಂತಿಗೆ ಧಕ್ಕೆ ತರುತ್ತಿವೆ ಎಂದು ಕತಾರ್ ಗಂಭೀರ ಆಪಾದನೆ ಮಾಡಿದೆ.
ಕಳೆದ ಕೆಲವೇ ವಾರಗಳಲ್ಲಿ ಕತಾರ್ ಒಂಬತ್ತನೇ ಬಾರಿಗೆ ವಿಶ್ವಸಂಸ್ಥೆಯ ಮೆಟ್ಟಿಲೇರಿದೆ. ಇರಾನ್‌ನ ಮಿಲಿಟರಿ ಕ್ರಮಗಳು ಮತ್ತು ವಾಯುಪ್ರದೇಶದ ಉಲ್ಲಂಘನೆಗಳ ಬಗ್ಗೆ ಕತಾರ್ ಪದೇ ಪದೇ ಎಚ್ಚರಿಸುತ್ತಲೇ ಬಂದಿದೆ.ಇರಾನ್‌ನ ಇತ್ತೀಚಿನ ದಾಳಿಗಳಿಂದಾಗಿ ಇಡೀ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿದೆ. “ಇದು ಕೇವಲ ದ್ವಿಪಕ್ಷೀಯ ಸಂಘರ್ಷವಲ್ಲ, ಇಡೀ ಗಲ್ಫ್ ರಾಷ್ಟ್ರಗಳ ಭದ್ರತೆಗೆ ಇರುವ ಸಂಚಕಾರ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕೇವಲ ಚರ್ಚೆ ನಡೆಸದೆ, ಇರಾನ್ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಈ ಉದ್ವಿಗ್ನತೆಯನ್ನು ಶಮನಗೊಳಿಸಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು ಎಂದು ಕತಾರ್ ರಾಯಭಾರಿ ಒತ್ತಾಯಿಸಿದ್ದಾರೆ. ಇಂಧನ ಪೂರೈಕೆ ಜಾಲಕ್ಕೆ ಆಗುತ್ತಿರುವ ಹಾನಿಯು ಜಾಗತಿಕ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದ್ದು, ಪರಿಸ್ಥಿತಿ ಕೈಮೀರುವ ಮೊದಲು ಅಂತರಾಷ್ಟ್ರೀಯ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.








