ನವದೆಹಲಿ: ರಾಜ್ಯಸಭೆಯ ನಿಕಟಪೂರ್ವ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಾರ್ವಜನಿಕ ಜೀವನದಲ್ಲಿ ನಿವೃತ್ತಿ ಎಂಬುದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿದ್ದು, ಜನಸೇವೆಯಲ್ಲಿ ತೊಡಗಿಸಿಕೊಳ್ಳಲು ಎಂದಿಗೂ ಅಂತ್ಯವಿಲ್ಲ ಎಂದು ಹೇಳಿದ್ದಾರೆ. “ರಾಜಕಾರಣದ ಪಯಣದಲ್ಲಿ ‘ಫುಲ್ ಸ್ಟಾಪ್’ ಅಥವಾ ಪೂರ್ಣವಿರಾಮ ಎಂಬುದೇ ಇಲ್ಲ,” ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ನಿವೃತ್ತಿ ಹೊಂದುತ್ತಿರುವ ಸದಸ್ಯರ ಸುದೀರ್ಘ ಅನುಭವವು ದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಆಸ್ತಿಯಾಗಿದೆ. ಸದನದಲ್ಲಿ ನೀವು ಕಳೆದ ದಿನಗಳು ಮತ್ತು ಚರ್ಚೆಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಲಿವೆ ಎಂದು ಮೋದಿ ಶ್ಲಾಘಿಸಿದರು.
ಸಂಸತ್ತಿನ ಸದಸ್ಯತ್ವ ಮುಗಿದಿರಬಹುದು, ಆದರೆ ಸಮಾಜದ ಏಳಿಗೆಗಾಗಿ ಮಾಡುವ ಕೆಲಸಗಳಿಗೆ ಯಾವುದೇ ಕಾಲಮಿತಿ ಇಲ್ಲ. ನಿಮ್ಮ ಜ್ಞಾನ ಮತ್ತು ಅನುಭವವನ್ನು ಸಮಾಜದ ಹಿತದೃಷ್ಟಿಯಿಂದ ಬಳಸುವುದನ್ನು ಮುಂದುವರಿಸಿ ಎಂದು ಅವರು ಕರೆ ನೀಡಿದರು.ಪಕ್ಷಾತೀತವಾಗಿ ಎಲ್ಲಾ ಸದಸ್ಯರ ಕೊಡುಗೆಯನ್ನು ನೆನಪಿಸಿಕೊಂಡ ಪ್ರಧಾನಿ, ಸದನದ ಘನತೆಯನ್ನು ಎತ್ತಿಹಿಡಿಯುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದು ಎಂದು ತಿಳಿಸಿದರು.
ಹೊಸ ಪಯಣಕ್ಕೆ ಶುಭ ಹಾರೈಕೆ
ನಿವೃತ್ತ ಸದಸ್ಯರ ಮುಂದಿನ ಜೀವನ ಸುಖಮಯವಾಗಿರಲಿ ಮತ್ತು ಅವರು ಸಾರ್ವಜನಿಕ ರಂಗದಲ್ಲಿ ಹೊಸ ಆಯಾಮಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಹಾರೈಸಿದರು.
”ಸಂಸತ್ತಿನ ಈ ನಾಲ್ಕು ಗೋಡೆಗಳ ಹೊರಗೂ ಒಂದು ವಿಶಾಲವಾದ ಪ್ರಪಂಚವಿದೆ. ಅಲ್ಲಿ ನಿಮ್ಮ ಅನುಭವದ ಅಗತ್ಯವಿದೆ. ರಾಜಕಾರಣದಲ್ಲಿ ನಾವು ಸದಾ ವಿದ್ಯಾರ್ಥಿಗಳೇ, ಕಲಿಕೆ ಮತ್ತು ಸೇವೆಗೆ ಕೊನೆಯಿಲ್ಲ” ಎಂದು ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಮನವರಿಕೆ ಮಾಡಿಕೊಟ್ಟರು.








