ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ಗ್ಯಾಸ್ ಸಿಲಿಂಡರ್ ಕೊರತೆಯ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಗ್ಯಾಸ್ ವಿತರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಮತ್ತು ಅಗತ್ಯ ಸೇವೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವಲಯವಾರು ಹಂಚಿಕೆಯ ಪ್ರಮಾಣವನ್ನು ನಿಗದಿಪಡಿಸಲಾಗಿದೆ.
ಯಾವ ವಲಯಕ್ಕೆ ಎಷ್ಟು ಗ್ಯಾಸ್? ಸರ್ಕಾರದ ಹೊಸ ಗೈಡ್‌ಲೈನ್ಸ್ ಪ್ರಕಾರ, ಅಗತ್ಯ ಸೇವೆಗಳಿಗೆ ಮೊದಲ ಆದ್ಯತೆ ನೀಡಲಾಗಿದೆ:
-
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳು: ಈ ವಲಯಗಳಿಗೆ ಶೇ. 100 ರಷ್ಟು ಗ್ಯಾಸ್ ಪೂರೈಕೆ ಮಾಡಲು ಸೂಚಿಸಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ಅಡಚಣೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.
-
ಕೃಷಿ ವಲಯ: ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಶೇ. 50 ರಷ್ಟು ಗ್ಯಾಸ್ ವಿತರಣೆ ಮಾಡಲು ನಿರ್ಧರಿಸಲಾಗಿದೆ.
-
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು: ಗ್ಯಾಸ್ ಕೊರತೆಯಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದ್ದು, ಸರ್ಕಾರವು ಈ ವಲಯಕ್ಕೆ ಕೇವಲ ಶೇ.10ರಷ್ಟು ಮಾತ್ರ ಗ್ಯಾಸ್ ವಿತರಣೆ ಮಾಡಲು ಸೂಚಿಸಿದೆ.
ಹೋಟೆಲ್ ಮಾಲೀಕರಲ್ಲಿ ಆತಂಕ: ಸರ್ಕಾರದ ಈ ನಿರ್ಧಾರದಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಸಿಲಿಂಡರ್ ಸಿಗದೆ ಪರದಾಡುತ್ತಿದ್ದ ಹೋಟೆಲ್ ಮಾಲೀಕರು, ಶೇ. 10 ರಷ್ಟು ಪೂರೈಕೆಯಿಂದ ಉದ್ಯಮ ನಡೆಸುವುದು ಅಸಾಧ್ಯ ಎಂದು ಅಳಲು ತೋಡಿಕೊಂಡಿದ್ದಾರೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗುವ ಅಥವಾ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚುವ ಭೀತಿ ಎದುರಾಗಿದೆ.
ಕೊರತೆಗೆ ಕಾರಣವೇನು? ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಗ್ಯಾಸ್ ಆಮದಿನಲ್ಲಿ ಕಡಿತ ಉಂಟಾಗಿದೆ. ಹೀಗಾಗಿ, ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರವು ಲಭ್ಯವಿರುವ ಗ್ಯಾಸ್ ಅನ್ನು ಆದ್ಯತೆಯ ಮೇರೆಗೆ ಹಂಚಿಕೆ ಮಾಡಲು ಈ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಗೃಹ ಬಳಕೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೇರಲಾಗಿದೆ.








