ಬೆಂಗಳೂರು: ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ (RTO) ಈ ಹಿಂದೆ ಇದ್ದ ಕ್ಲಿಯರೆನ್ಸ್ ಸರ್ಟಿಫಿಕೇಟ್ (CC) ವಿತರಣೆಯ ಸಮಸ್ಯೆಯನ್ನು ಬಗೆಹರಿಸಲಾಗಿದ್ದು, ಇನ್ನು ಮುಂದೆ ಸಿಸಿ ಸೇವೆ ಸುಗಮವಾಗಿ ನಡೆಯಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಪರಿಷತ್ತಿನಲ್ಲಿ ಮಂಗಳವಾರ ಶೂನ್ಯವೇಳೆ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಸರ್ಕಾರದ ಗಮನ ಸೆಳೆದರು. ವಾಹನ ಮಾಲೀಕತ್ವ ವರ್ಗಾವಣೆಗೆ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಆರ್ಟಿಒ ಕಚೇರಿಗಳಲ್ಲಿ ಸಿಸಿ ಸಿಗುತ್ತಿಲ್ಲ. ಇದರಿಂದಾಗಿ ಮಾಲೀಕರು ಪರದಾಡುವಂತಾಗಿದೆ ಮತ್ತು ಒಂದು ವೇಳೆ ಈ ಸಮಯದಲ್ಲಿ ಅಪಘಾತ ಸಂಭವಿಸಿದರೆ ವಿಮೆ ಸೌಲಭ್ಯವೂ ಸಿಗುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಕೇಂದ್ರ ಸರ್ಕಾರದ ‘ಪರಿವಾಹನ್’ ತಂತ್ರಾಂಶದ ಮೂಲಕ ಈ ಸೇವೆಯನ್ನು ನೀಡಲಾಗುತ್ತಿದ್ದು, ಈಗಾಗಲೇ ಶೇ. 90 ರಷ್ಟು ಕೆಲಸ ಪೂರ್ಣಗೊಂಡಿದೆ. ಬಾಕಿ ಇರುವ ಶೇ. 10 ರಷ್ಟು ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಲಾಗುವುದು.
ಅಧಿಕಾರ ವಿಕೇಂದ್ರೀಕರಣ: ಈ ಹಿಂದೆ ಇಡೀ ರಾಜ್ಯಕ್ಕೆ ಒಬ್ಬರೇ ಜಂಟಿ ಆಯುಕ್ತರಿಗೆ ಸಿಸಿ ಪತ್ರ ವಿತರಿಸುವ ಜವಾಬ್ದಾರಿ ನೀಡಲಾಗಿತ್ತು. ಈಗ ಈ ಅಧಿಕಾರವನ್ನು ಆರು ಜನ ಜಂಟಿ ಆಯುಕ್ತರಿಗೆ ಹಸ್ತಾಂತರಿಸಲಾಗಿದೆ.
ಮನೆಬಾಗಿಲಿಗೆ ಸೇವೆ: ಸಿಸಿ ಸೇವೆ ಈಗ ಸುಗಮವಾಗಿದ್ದು, ಅರ್ಜಿ ಸಲ್ಲಿಸಿದ 48 ಗಂಟೆಯೊಳಗೆ ಅರ್ಜಿದಾರರ ಮನೆ ಬಾಗಿಲಿಗೆ ಪತ್ರ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯ ಈ ಹೊಸ ನಿರ್ಧಾರದಿಂದ ವಾಹನ ಮಾಲೀಕರಿಗೆ ಆಗುತ್ತಿದ್ದ ಅನಗತ್ಯ ವಿಳಂಬ ತಪ್ಪಿದಂತಾಗಿದೆ.








