ಬೆಂಗಳೂರು : ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರು ಮಕ್ಕಳ ಪಾಲನೆಗಾಗಿ ತಾವು ಇಚ್ಛಿಸಿದ ಶಾಲೆಯಲ್ಲೇ 5 ವರ್ಷ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಲಾಲನೆ ಪಾಲನೆಗೆ ಹೆಚ್ಚು ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ, ವಿಶ್ರಾಂತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಈ ಕೆಳಗಿನ ಪ್ರಮುಖ ಅಂಶಗಳನ್ನು ಉತ್ತರಿಸಿದರು. ಮಹಿಳಾ ಶಿಕ್ಷಕಿಯರು ಮಾತೃತ್ವ ರಜೆಯೊಂದಿಗೆ ಶಿಶುಪಾಲನಾ ರಜೆಯನ್ನು ಸಂಯೋಜಿಸಿ ಬಳಸಿಕೊಳ್ಳಲು ಇಚ್ಛಿಸಿದಲ್ಲಿ ಅಥವಾ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದರೆ, ಸಕ್ಷಮ ಪ್ರಾಧಿಕಾರವು 15 ದಿನಗಳ ಕಾಲಮಿತಿಯೊಳಗೆ ರಜೆ ಮಂಜೂರು ಮಾಡಬೇಕು ಎಂದು ಹೇಳಿದ್ದಾರೆ.
ಇಚ್ಛಿಸಿದ ಸ್ಥಳಕ್ಕೆ ವರ್ಗಾವಣೆ: ಮಾತೃತ್ವ ರಜೆ ಮುಗಿಸಿ ಮರಳಿ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕಿಯರಿಗೆ, ಮಗುವಿನ ಆರೈಕೆಗೆ ಅನುಕೂಲವಾಗುವಂತೆ ಮಗುವಿಗೆ 5 ವರ್ಷ ತುಂಬುವವರೆಗೆ ಅವರು ಇಚ್ಛಿಸುವ ಸ್ಥಳಕ್ಕೆ ವರ್ಗಾವಣೆ ಪಡೆಯಲು ಕೌನ್ಸೆಲಿಂಗ್ ವೇಳೆ ಅವಕಾಶ ಕಲ್ಪಿಸಲಾಗುವುದು.
ಅತಿಥಿ ಶಿಕ್ಷಕರ ನೇಮಕ: ಮಹಿಳಾ ಶಿಕ್ಷಕಿಯರು ದೀರ್ಘಾವಧಿ ರಜೆ ಮೇಲೆ ತೆರಳಿದಾಗ ಶಾಲೆಯಲ್ಲಿ ಮಕ್ಕಳ ಓದಿಗೆ ತೊಂದರೆಯಾಗದಂತೆ, ಆ ರಜೆ ಅವಧಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.
ಈ ನಿರ್ಧಾರದಿಂದಾಗಿ ರಾಜ್ಯದ ಸಾವಿರಾರು ಮಹಿಳಾ ಶಿಕ್ಷಕಿಯರಿಗೆ ತಮ್ಮ ವೃತ್ತಿಜೀವನ ಹಾಗೂ ಮಗುವಿನ ಪಾಲನೆಯನ್ನು ಸಮತೋಲನ ಮಾಡಲು ಹೆಚ್ಚಿನ ಅನುಕೂಲವಾಗಲಿದೆ.
ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರು ಮಕ್ಕಳ ಪಾಲನೆಗಾಗಿ ತಾವು ಇಚ್ಛಿಸಿದ ಶಾಲೆಯಲ್ಲೇ 5 ವರ್ಷ ಕೆಲಸ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಲಾಲನೆ ಪಾಲನೆಗೆ ಹೆಚ್ಚು ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ,… pic.twitter.com/ZNqdwAM6rP
— DIPR Karnataka (@KarnatakaVarthe) March 17, 2026








