ಬೆಳಗಾವಿ : ಇವನೆಂತ ಕಿಲಾಡಿ ಇದಾನೆ ಎಂದರೆ ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಈ ವೇಳೆ ತನ್ನ ಹೆಸರಿನಲ್ಲಿದ್ದ ಆಸ್ತಿ ಬರೆದು ಕೊಡಲು ಮಹಿಳೆ ಒಪ್ಪದೇ ಇದ್ದಾಗ, ಆಕೆಯನ್ನು ಗದ್ದೆಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ, ಆರೋಪಿಯು ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಿದ್ದಾನೆ. ಆದರೆ ಪೊಲೀಸರು ಸಿನೆಮಾ ಶೈಲಿಯಲ್ಲಿ ಆತನನ್ನು ಅಲ್ಲಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು ಅಥಣಿ ಸ್ಥಳೀಯ ನಿವಾಸಿ ಕುಮಾರ್ ಕಲ್ಲಪ್ಪ ಹವಾಲ್ದಾರ್ ಬಂಧಿತ ಆರೋಪಿ. ಅಥಣಿಯಲ್ಲಿ ವಾಸವಾಗಿದ್ದ ಸುಜಾತಾ (34) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಮಾರ್ಚ್ 12ರಂದು ಅಥಣಿಯಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಕಬ್ಬಿನ ತೋಟದಲ್ಲಿ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದಾಗ, ಲೀಲಾವತಿ ಭೀಮಪ್ಪ ಎಂಬುವರು ಇದು ತನ್ನ ಮಗಳು ಸುಜಾತಾಳ ಮೃತದೇಹ ಎಂದು ಗುರುತಿಸಿದ್ದಾರೆ. ಸುಜಾತಾ ಕೌಟುಂಬಿಕ ಸಮಸ್ಯೆಯಿಂದ ಆರು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದು ಅಥಣಿಯಲ್ಲಿ ವಾಸವಾಗಿದ್ದರು. ಈ ವೇಳೆ ಕುಮಾರ್ ಕಲ್ಲಪ್ಪ ಹವಾಲ್ದಾರ್ ಪರಿಚಯವಾಗಿ, ಆತ ಮದುವೆಯಾಗುವುದಾಗಿ ನಂಬಿಸಿದ್ದ.
ಆರೋಪಿ ಕುಮಾರ್, ಸುಜಾತಾಳ ಹೆಸರಿನಲ್ಲಿದ್ದ ಮನೆ ಹಾಗೂ ಜಮೀನನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಮತ್ತು ಕೂಡಲೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ ಆಕೆ “ಮದುವೆಯಾದ ಬಳಿಕವೇ ಆಸ್ತಿ ಬರೆದುಕೊಡುತ್ತೇನೆ” ಎಂದು ತಿಳಿಸಿದ್ದಳು. ಮದುವೆ ವಿಳಂಬವಾಗುತ್ತಿದ್ದರಿಂದ ಹಾಗೂ ಆಸ್ತಿ ಕೈ ಸೇರದ ಕಾರಣ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಆರೋಪಿ ಕುಮಾರ್ ಅನುಮಾನಗೊಂಡಿದ್ದ.
ಇದೇ ದ್ವೇಷದಿಂದ, ಒಂದು ದಿನ ಸಂಜೆ ಕಿರಾಣಿ ಅಂಗಡಿಗೆ ಹೋಗಿ ಬರೋಣ ಎಂದು ನಂಬಿಸಿ ಶಿನಾಳ ಗ್ರಾಮದಲ್ಲಿರುವ ತನ್ನ ತಂದೆ-ತಾಯಿಯ ಕಬ್ಬಿನ ತೋಟಕ್ಕೆ ಆಕೆಯನ್ನು ಕರೆದೊಯ್ದಿದ್ದ. ಅಲ್ಲಿ ಆಕೆಯ ಚೂಡಿದಾರದ ಶಾಲಿನಿಂದ (ವೇಲ್) ಕತ್ತು ಬಿಗಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪೊಲೀಸರ ಕಣ್ಣುತಪ್ಪಿಸಲು ಆರೋಪಿ ದೇವಸ್ಥಾನದ ದರ್ಶನದ ನೆಪದಲ್ಲಿ ಆಂಧ್ರಪ್ರದೇಶದ ಶ್ರೀಶೈಲಕ್ಕೆ ಪರಾರಿಯಾಗಿದ್ದ.








