ಜಮ್ಶೆಡ್ಪುರ : ಅದು ಮದುವೆ ಮನೆ ಎಲ್ಲರು ಮದ್ವೆ ಸಂಭ್ರಮದಲ್ಲಿ ಇದ್ದರು. ಆದರೆ ಅದೊಂದು ಘಟನೆ ಇಡಿ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಹೌದು ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ರಸಗುಲ್ಲಾ ಸೇವನೆಯು ವ್ಯಕ್ತಿಯೊಬ್ಬರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದ ಘಟನೆ ಜಾರ್ಖಂಡ್ನ ಜಮ್ಶೆಡ್ಪುರ ಸಮೀಪದ ಮಲಿಯಂತ ಗ್ರಾಮದಲ್ಲಿ ನಡೆದಿದೆ.
ರಸಗುಲ್ಲಾ ಗಂಟಲಲ್ಲಿ ಸಿಲುಕಿ ಲಲಿತ್ ಸಿಂಗ್ (41) ಎಂಬುವವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಶುಕ್ರವಾರ ತಡರಾತ್ರಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಲಿತ್ ಸಿಂಗ್ ಕೂಡ ಪಾಲ್ಗೊಂಡಿದ್ದರು. ಊಟದ ಸಮಯದಲ್ಲಿ ರಸಗುಲ್ಲಾ ತಿನ್ನುತ್ತಿದ್ದಾಗ, ಅದು ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಅವರಿಗೆ ತಕ್ಷಣವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಸಿಂಗ್ ಅವರು ಉಸಿರಾಡಲು ಕಷ್ಟಪಡುತ್ತಿರುವುದನ್ನು ಕಂಡು ಅಲ್ಲಿದ್ದ ಅತಿಥಿಗಳು ಮತ್ತು ಸಂಬಂಧಿಕರು ಅವರ ಗಂಟಲಿನಲ್ಲಿ ಸಿಲುಕಿದ್ದ ರಸಗುಲ್ಲಾವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣ ಅವರನ್ನು ಜಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.







