ಮಂಡ್ಯ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಭಯವನ್ನು ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವಂತೆ ಮದ್ದೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ. ಧನಂಜಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
2025 – 26 ನೇ ಸಾಲಿನ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಕ್ರಮಗಳ ಕುರಿತು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಮದ್ದೂರು ತಾಲೂಕಿನಲ್ಲಿ ಪರೀಕ್ಷೆಯನ್ನು ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮದ್ದೂರು ತಾಲೂಕಿನಲ್ಲಿ 39 ಸರ್ಕಾರಿ, 16 ಅನುದಾನಿತ, 29 ಅನುದಾನ ರಹಿತ, ಹಾಗೂ 6 ವಸತಿ ಶಾಲೆಗಳಿಂದ ಒಟ್ಟು 3545 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಅದರಲ್ಲಿ ಗಂಡು ಮಕ್ಕಳು 1562, ಹೆಣ್ಣು ಮಕ್ಕಳು 1554 ಹಾಗೂ 16 ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿದ್ದಾರೆ ಎಂದರು.
ತಾಲೂಕಿನ 12 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಎಲ್ಲಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಉಚಿತವಾಗಿ ಸರ್ಕಾರಿ ಸಾರಿಗೆ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ (ಸೆಕ್ಷನ್ 144) ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ವಿಧ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿ ಪರೀಕ್ಷಾ ಕೇಂದ್ರಗಳ ನಿಯಮಗಳನ್ನು ಪಾಲಿಸಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದರು.
ಪರೀಕ್ಷಾ ಕಾರ್ಯ ನಿರ್ವಹಣೆಗಾಗಿ
12 ಮಂದಿ ಮುಖ್ಯ ಅಧೀಕ್ಷಕರು.
4 ಮಂದಿ ಉಪ ಮುಖ್ಯ ಅಧೀಕ್ಷಕರು.
12 ಮಂದಿ ಪ್ರಶ್ನೆ ಪತ್ರಿಕೆ ಅಭಿರಕ್ಷಕರು.
4 ಮಂದಿ ಮಾರ್ಗಾಧಿಕಾರಿಗಳು.
12 ಮಂದಿ ಸ್ಥಾನಿಕ ಜಾಗೃತ ದಳ ಅಧಿಕಾರಿಗಳು.
12 ಮಂದಿ ಮೊಬೈಲ್ ಪೋನ್ ಸ್ವಾಧೀನಾಧಿಕಾರಿಗಳು.
160 ಮಂದಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ತಾಲೂಕಿನ ಎಲ್ಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಲು ಸಹಕರಿಸಬೇಕೆಂದು ವಿನಂತಿಸಿದರು.
ಇನ್ನು ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ ಜಿಲ್ಲೆಯಲ್ಲೆ ಮದ್ದೂರು 5 ಸ್ಥಾನ ಪಡೆದಿತ್ತು. ಹೀಗಾಗಿ 1 ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಅನಂತೇಗೌಡ, ಕಾರ್ಯದರ್ಶಿ ಚಂದ್ರಶೇಖರ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ದೇವರಾಜ್, ಜಿಲ್ಲಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಶ್, ಬಿಆರ್ಸಿ ನಾಗೇಶ್, ಮುಖ್ಯ ಶಿಕ್ಷಕ ಶಿವರಾಮಣ್ಣ, ಇಸಿಓ ರಮೇಶ್ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BIG NEWS: ಸಾಗರದ ಲಿಂಗದಹಳ್ಳಿ ಬಳಿಯಲ್ಲಿ ‘ಲೇಔಟ್’ ಹೆಸರಲ್ಲಿ ‘ಮರಗಳ ಮಾರಣಹೋಮ’
Health Tips: ಇವು ‘ದ್ರಾಕ್ಷಿ ಸೇವನೆ’ಯ ಅದ್ಭುತ ಆರೋಗ್ಯಕರ ಪ್ರಯೋಜನಗಳು








