ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ತನ್ನ ‘ಆಪರೇಷನ್ ಟ್ರೂ ಪ್ರಾಮಿಸ್-4’ ಅಡಿಯಲ್ಲಿ ಶತ್ರು ರಾಷ್ಟ್ರಗಳ ರಕ್ಷಣಾ ಕವಚವನ್ನೇ ಸೀಳಬಲ್ಲ ಅತ್ಯಾಧುನಿಕ ‘ಸಜ್ಜೀಲ್’ (Sejjil) ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಮೊದಲ ಬಾರಿಗೆ ಯುದ್ಧದಲ್ಲಿ ಬಳಸಿದೆ. ಈ ಕ್ಷಿಪಣಿಯು ಹಾರಾಟದ ಸಮಯದಲ್ಲಿ ದಿಕ್ಕನ್ನು ಬದಲಿಸುತ್ತಾ ಸಾಗುವುದರಿಂದ ಇದನ್ನು ‘ಡ್ಯಾನ್ಸಿಂಗ್ ಮಿಸೈಲ್’ (ನೃತ್ಯ ಮಾಡುವ ಕ್ಷಿಪಣಿ) ಎಂದು ಕರೆಯಲಾಗುತ್ತದೆ.
ಏನಿದು ‘ಡ್ಯಾನ್ಸಿಂಗ್ ಮಿಸೈಲ್’? ಯಾಕಿಷ್ಟು ಅಪಾಯಕಾರಿ?
ರಡಾರ್‌ಗಳಿಗೆ ಚಳ್ಳೆಹಣ್ಣು: ಸಾಮಾನ್ಯವಾಗಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಒಂದು ನಿರ್ದಿಷ್ಟ ಪಥದಲ್ಲಿ ಸಾಗುತ್ತವೆ. ಆದರೆ ಈ ‘ಸಜ್ಜೀಲ್’ ಕ್ಷಿಪಣಿಯು ವಾಯುಮಂಡಲಕ್ಕೆ ಮರುಪ್ರವೇಶಿಸುವಾಗ ಅನಿರೀಕ್ಷಿತವಾಗಿ ‘zigzag’ ಮಾದರಿಯಲ್ಲಿ ಅಥವಾ ನೃತ್ಯ ಮಾಡುವಂತೆ ತನ್ನ ಪಥವನ್ನು ಬದಲಿಸಬಲ್ಲದು. ಈ ಕಾರಣದಿಂದ ಇಸ್ರೇಲ್‌ನ ‘ಐರನ್ ಡೋಮ್’ ಅಥವಾ ಅಮೆರಿಕದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳಿಗೂ ಇದನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ.
ವೇಗ ಮತ್ತು ಸಾಮರ್ಥ್ಯ: ಇದು ಸುಮಾರು 2,000 ಕಿಲೋಮೀಟರ್ ದೂರದವರೆಗೆ ಗುರಿಯನ್ನು ತಲುಪಬಲ್ಲದು. ಅಂದರೆ ಇರಾನ್‌ನಿಂದಲೇ ಇಸ್ರೇಲ್ ಮತ್ತು ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ನೇರವಾಗಿ ಧ್ವಂಸಗೊಳಿಸಬಹುದು.
ಘನ ಇಂಧನ ತಂತ್ರಜ್ಞಾನ: ಈ ಕ್ಷಿಪಣಿಯು ಘನ ಇಂಧನವನ್ನು (Solid Fuel) ಬಳಸುವುದರಿಂದ, ಇದನ್ನು ಕೇವಲ ಕೆಲವೇ ನಿಮಿಷಗಳಲ್ಲಿ ಉಡಾವಣೆಗೆ ಸಿದ್ಧಪಡಿಸಬಹುದು. ದ್ರವ ಇಂಧನ ಕ್ಷಿಪಣಿಗಳಂತೆ ಇದನ್ನು ಸಿದ್ಧಪಡಿಸಲು ಗಂಟೆಗಟ್ಟಲೆ ಸಮಯ ಬೇಕಿಲ್ಲ.
ಅವಳಿ ಹಂತದ ಕ್ಷಿಪಣಿ: ಇದು ಎರಡು ಹಂತದ ಇಂಜಿನ್ ಹೊಂದಿದ್ದು, ಅತ್ಯಂತ ವೇಗವಾಗಿ ಮತ್ತು ನಿಖರವಾಗಿ ಗುರಿಯನ್ನು ತಲುಪುತ್ತದೆ.








