ಮಂಡ್ಯ : ವಿಶ್ವೇಶ್ವರಯ್ಯ ನಾಲಾ ಸೇರಿದಂತೆ ಎಲ್ಲಾ ಶಾಖಾ ನಾಲೆಗಳ ಅಭಿವೃದ್ಧಿಗೆ 100 ಕೋಟಿ ಅನುದಾನ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆಯಿಂದ ಕ್ಯಾಬಿನೆಟ್ ಅಪ್ರೂವಲ್ ಪಡೆಯಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಅವ್ರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಂಡ್ಯ ಕ್ಷೇತ್ರದಲ್ಲಿ ಈಗಾಗಲೇ 200 ಕೋಟಿ ಕಾಮಗಾರಿ ಮುಗಿದಿದೆ. ಬಸರಾಳು ವ್ಯಾಪ್ತಿಯ ಹೇಮಾವತಿ ನಾಲಾ ಅಭಿವೃದ್ಧಿಗೆ 350ಕೋಟಿ ಕಾಮಗಾರಿಗೆ ತಾಂತ್ರಿಕ ಅನುಮೋದನೆ ಸಿಕ್ಕಿದೆ. ಮಂಡ್ಯ ನಗರದ ಪ್ರಮುಖ ವೃತ್ತಗಳನ್ನ ವಿದೇಶಿ ಮಾದರಿ ಅಭಿವೃದ್ಧಿ ಮಾಡುವ ಗುರಿ ಇದೇ.
ಹೊಸ ಕಾರ್ಖಾನೆ ಬದಲು ಮೈಶುಗರ್ ಕಾರ್ಖಾನೆಯಲ್ಲಿ 60ಕೋಟಿ ವೆಚ್ಚದಲ್ಲಿ ಹೊಸ ಬಾಯ್ಲರ್ ಹೌಸ್ ನಿರ್ಮಾಣ ಮಾಡಲಾಗುತ್ತದೆ. 33ಕೋಟಿ ವೆಚ್ಚದಲ್ಲಿ ಕಾರ್ಮಿಕರ ವಸತಿ ಶಾಲೆ ಬಜೆಟ್ನಲ್ಲಿ ಘೋಷಣೆಯಾಗಿದೆ. ಮೈಶುಗರ್ ಭ್ರಷ್ಟಾಚಾರ ತನಿಖೆ ಚಾಲ್ತಿಯಲ್ಲಿದೆ. ತನಿಖಾ ತಂಡ ಸರ್ಕಾರಕ್ಕೆ ವರದಿ ನೀಡಿದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದರು.
ಜಿಲ್ಲೆಯಲ್ಲಿ 4ಕಡೆಗಳಲ್ಲಿ ಕೈಗಾರಿಕೆಗೆ ಜಾಗ ಗುರುತಿಸಲಾಗಿದೆ. ನಮ್ಮದು ನೀರಾವರಿ ಪ್ರದೇಶ, ಭೂಮಿಯ ಲಭ್ಯತೆ ಕಡಿಮೆ. ಕಲ್ಲಹಳ್ಳಿಯಲ್ಲಿ ಖೇಲೋ ಇಂಡಿಯಾಗೆ ಜಾಗ ಕೊಟ್ರು ಪಡೆಯಲಿಲ್ಲ. ನಗರದಲ್ಲಿ ಯಾಕೆ ಕ್ರೀಡಾಂಗಣ ಮಾಡ್ಲಿಲ್ಲ ಅಂದ್ರೆ ಸರ್ಕಾರ ಸ್ಪಂದಿಸಲಿಲ್ಲ ಅಂತೀರಾ. ಯಾಕಿಷ್ಟು ಗೊಂದಲದಲ್ಲಿದ್ದೀರಾ? ತಜ್ಞರು ಒಪ್ಪಿದ ಕಡೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ರೆಡಿ ಇದೆ ಎಂದು ಕೇಂದ್ರ ಸಚಿವ ಎಚ್ಡಿಕೆ ವಿರುದ್ಧ ಶಾಸಕ ಗಣಿಗ ರವಿ ಅಸಮಾಧಾನ ಹೊರಹಾಕಿದರು.








